ರಾಹುಲ್ ದ್ರಾವಿಡ್: ಅಬ್ಬರವಿಲ್ಲದ ಅದ್ಭುತ, ಭಾರತೀಯ ಕ್ರಿಕೆಟ್‌ನ 'ನಿಜವಾದ ಜಂಟಲ್‌ಮ್ಯಾನ್'

ಕ್ರಿಕೆಟ್ ಎಂದರೆ ಕೇವಲ ರನ್‌ಗಳ ಮಳೆ ಅಥವಾ ವಿಕೆಟ್‌ಗಳ ಪತನವಲ್ಲ; ಅದು ಸಂಯಮ, ನಿಸ್ವಾರ್ಥತೆ ಮತ್ತು ಬದ್ಧತೆಯ ಆಟ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ದೈತ್ಯ ಪ್ರತಿಭೆಗಳು, ಗಂಗೂಲಿ ಅವರಂತಹ ಆಕ್ರಮಣಕಾರಿ ನಾಯಕರು, ಲಕ್ಷ್ಮಣ್ ಅವರಂತಹ ಕಲಾತ್ಮಕ ಆಟಗಾರರು ಮತ್ತು ಸೆಹ್ವಾಗ್ ಅವರಂತಹ ಎದೆಗಾರಿಕೆಯ ಆಟಗಾರರು ಮಿಂಚಿದ್ದಾರೆ. ಆದರೆ, ಇವರೆಲ್ಲರ ಯಶಸ್ಸಿನ ಹಿಂದೆ ಒಬ್ಬ ವ್ಯಕ್ತಿ ಮೌನವಾಗಿ, ಗಟ್ಟಿಯಾಗಿ ನಿಂತಿದ್ದರು. ಅವರೇ ನಮ್ಮ ಕರುನಾಡಿನ ಹೆಮ್ಮೆ, ರಾಹುಲ್ ದ್ರಾವಿಡ್.

ದ್ರಾವಿಡ್ ಅವರು ಸೆಹ್ವಾಗ್‌ರಂತೆ ಅಬ್ಬರಿಸಲಿಲ್ಲ, ಸಚಿನ್ ಅವರಂತೆ ಮೈಲಿಗಲ್ಲುಗಳ ಹಿಂದೆ ಬೀಳಲಿಲ್ಲ,ಗಂಗೂಲಿಯಂತೆ ಹಠಕ್ಕೆ ಬೀಳುತ್ತಿರಲಿಲ್ಲ. ಆದರೆ, ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ 'ಗೋಡೆ'ಯಂತೆ ನಿಂತು ಭಾರತಕ್ಕೆ ಆಸರೆಯಾದರು. ಇವರ ನಿಸ್ವಾರ್ಥ ಕ್ರಿಕೆಟ್ ಜೀವನದ ಕೆಲವು ಮರೆಯಲಾಗದ ಕ್ಷಣಗಳು ಇಲ್ಲಿವೆ.


೧. ಅಲನ್ ಡೊನಾಲ್ಡ್ ಎದುರು ತೋರಿದ ಎದೆಗಾರಿಕೆ (೧೯೯೭)


೧೯೯೭ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯವದು. ಆಗಿನ ಕಾಲದ ಅತ್ಯಂತ ಭಯಾನಕ ವೇಗಿ ಅಲನ್ ಡೊನಾಲ್ಡ್‌ ಎಂದರೆ ಘಟಾನುಘಟಿ ಬ್ಯಾಟರ್‌ಗಳೇ ನಡುಗುತ್ತಿದ್ದರು. ಅಂತಹ ಸಮಯದಲ್ಲಿ, ಟೆಸ್ಟ್ ಆಟಗಾರ ಎಂಬ ಹಣೆಪಟ್ಟಿ ಹೊತ್ತಿದ್ದ ಯುವ ದ್ರಾವಿಡ್, ಡೊನಾಲ್ಡ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ಅಚ್ಚರಿ ಮೂಡಿಸಿದ್ದರು. ಡೊನಾಲ್ಡ್ ಅವರು ತಮ್ಮ ಬೌಲಿಂಗ್‌ಗೆ ರನ್ ಬಾರಿಸುವುದನ್ನು ಯಾವತ್ತೂ ಸಹಿಸಿಕೊಳ್ಳುತ್ತಿದ್ದವರಲ್ಲ. ಆದರೆ ಆ ಪಂದ್ಯದಲ್ಲಿ ದ್ರಾವಿಡ್ ಡೊನಾಲ್ಡ್‌ಗೆ ಸಿಕ್ಸರ್ ಸಿಡಿಸಿ ಅವರ ಕೋಪವನ್ನು ನೆತ್ತಿಗೇರಿಸಿದ್ದರು. ಅಂದು ದ್ರಾವಿಡ್ ಅವರ ತಾಳ್ಮೆಯ ಹಿಂದೆ ಅಡಗಿದ್ದ ಅದಮ್ಯ ಶಕ್ತಿಯ ಪರಿಚಯವಾಗಿತ್ತು.

೨. ಅಡಿಲೇಡ್‌ನಲ್ಲಿ ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸಿದ ಕ್ಷಣ (೨೦೦೩)

೧೯೯೦ ರ ದಶಕದಲ್ಲಿ ಭಾರತ "SENA " ದೇಶಗಳಲ್ಲಿ ಟೆಸ್ಟ್ ಸರಣಿ ಇರಲಿ, ಒಂದು ಟೆಸ್ಟ್ ಪಂದ್ಯವನ್ನು ಸಹ ಗೆದ್ದಿರಲಿಲ್ಲ. ಅದು ೨೦೦೩ ರಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕೈಗೊಂಡ ಟೆಸ್ಟ್ ಸರಣಿ ಪ್ರವಾಸ. ಅಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ೨೨ ವರ್ಷಗಳಿಂದ ಭಾರತ ಅಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಆದರೆ ೨೦೦೩ರ ಅಡಿಲೇಡ್ ಟೆಸ್ಟ್‌ನಲ್ಲಿ ದ್ರಾವಿಡ್ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ ಅರ್ಧಶತಕ ಬಾರಿಸಿ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.೯೦ ರ ದಶಕದಲ್ಲಿ ವಿದೇಶಿ ನೆಲದಲ್ಲಿ ಎಷ್ಟೋ ಬಾರಿ ಭಾರತ ಗೆಲುವಿನ ಸಮೀಪ ಬಂದು ಮುಗ್ಗರಿಸಿದ್ದ ಉದಾಹರಣೆಗಳು ಇದ್ದವು. ಆದರೆ ದ್ರಾವಿಡ್ ಎರಡು ಇನ್ನಿಂಗ್ಸ್ ಗಳಲ್ಲಿ ಒಂದರ ಹಿಂದೆ ಎರಡು ಬಾರಿ ಅದ್ಬುತವಾಗಿ  ಬ್ಯಾಟಿಂಗ್ ಮಾಡುವ  ಮೂಲಕ ೨೨ ವರ್ಷಗಳ ನಂತರ ಭಾರತಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

೩. ಈಡನ್ ಗಾರ್ಡನ್ಸ್‌ನ ಜುಗಲ್‌ಬಂದಿ (೨೦೦೧)


ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸತತ ೧೫ ಟೆಸ್ಟ್ ಪಂದ್ಯಗಳನ್ನು ಗೆದ್ದು ಭಾರತಕ್ಕೆ ಟೆಸ್ಟ್ ಸರಣಿ ಆಡಲು ಬಂದಿಳಿದಿತ್ತು. ಇಂತಹ ದೈತ್ಯ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ದಶಕಗಳೇ ಆಗಿದ್ದವು. ನಾಯಕ ಸ್ಟೀವ್ ವಾ ಸಹ ಈ ಸರಣಿಯನ್ನು Final Frontier ಅನ್ನುವ ಮೂಲಕ ತಮ್ಮ ಅಶ್ವಮೇಧ ಕುದರೆಯನ್ನು ಕಟ್ಟಿದ್ದರು. ಅತ್ತ ಭಾರತ ತಂಡ ಮ್ಯಾಚ್ ಫಿಕ್ಸಿಂಗ್ ಎಂಬ ಕತ್ತಲೆ ಅಧ್ಯಾಯದಿಂದ ಹೊರಬಂದು, ಹೊಸ ನಾಯಕ ಗಂಗೂಲಿಯ ನಾಯಕತ್ವದಲ್ಲಿ ಪರಿವರ್ತನೆಯ ಹಂತದಲ್ಲಿತ್ತು. ಮುಂಬೈನಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ಆಸ್ಟ್ರೇಲಿಯಾ ಸುಲಭವಾಗಿ ಗೆದ್ದು, ತಮ್ಮ ‘Final Frontier’ ಕನಸನ್ನು ಸಾಕಾರಗೊಳಿಸಲು ತುದಿಗಾಲಲ್ಲಿ ನಿಂತಿತ್ತು. ಸತತ ೧೬ ಪಂದ್ಯಗಳನ್ನು ಗೆದ್ದಿದ್ದ ಸ್ಟೀವ್ ವಾ ನಾಯಕತ್ವದ ಅಜೇಯ ಆಸ್ಟ್ರೇಲಿಯಾ ತಂಡದ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ. ಪ್ರಥಮ ಇನ್ನಿಂಗ್ಸ್ ನಂತರ ಫಾಲೋ ಆನ್ ಪಡೆದಿದ್ದ ಭಾರತದ ಸ್ಥಿತಿ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿತ್ತು. ಸದಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದ ರಾಹುಲ್ ದ್ರಾವಿಡ್ ಫಾರಂ ಕಳೆದುಕೊಂಡ ಕಾರಣದಿಂದ ಆರನೇ ಕ್ರಮಾಂಕಕ್ಕೆ ಇಳಿಸಲ್ಪಟ್ಟರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಲಕ್ಷ್ಮಣ್ ಸೊಗಸಾಗಿ ಬ್ಯಾಟಿಂಗ್ ಆಡುತ್ತಿದ್ದರು. ಇನ್ನೇನು ಸ್ಟೀವ್ ವಾ ಅವರ ಕನಸು ನನಸಾಗಲಿದೆ ಎನ್ನುವಷ್ಟರಲ್ಲಿ, ಲಕ್ಷ್ಮಣ್ ಮತ್ತು ದ್ರಾವಿಡ್ ಅವರ ಬ್ಯಾಟಿಂಗ್ ಜುಗಲ್ಬಂದಿ ಇಡೀ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿತು. ಆ ದಿನ ದ್ರಾವಿಡ್ ೧೮೦ ರನ್ ಕಲೆ ಹಾಕುವ ಮೂಲಕ, ಲಕ್ಷ್ಮಣ್ ಅವರ ಕ್ರಿಕೆಟ್ ಲೋಕದ ಅದ್ಭುತ ಇನ್ನಿಂಗ್ಸ್ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂದಿನ ಪಂದ್ಯವನ್ನು ಗೆಲ್ಲುವ ಮೂಲಕ, ಸತತ ೧೬ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಅಶ್ವಮೇಧ ಕುದುರೆಯನ್ನು ಭಾರತ ಕಟ್ಟಿ ಹಾಕಿತು. ವಿ.ವಿ.ಎಸ್. ಲಕ್ಷ್ಮಣ್ ಜೊತೆಗೂಡಿ ದ್ರಾವಿಡ್ ನಡೆಸಿದ ಆ ಹೋರಾಟ ಕ್ರಿಕೆಟ್ ಲೋಕದ ಅದ್ಭುತಗಳಲ್ಲಿ ಒಂದು. ಫಾಲೋ-ಆನ್ ಪಡೆದೂ ಪಂದ್ಯ ಗೆಲ್ಲಬಹುದು ಎಂದು ಈ ಜೋಡಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತು.

೪. ವೈಯಕ್ತಿಕ ಮೈಲಿಗಲ್ಲಿಗಿಂತ ದೇಶವೇ ಮೊದಲು


ಅದು ೨೦೦೪ರಲ್ಲಿ ಪಾಕಿಸ್ತಾನದ ವಿರುದ್ಧ, ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆದ ಟೆಸ್ಟ್ ಪಂದ್ಯ. ಗಂಗೂಲಿ ಅವರ ಅನುಪಸ್ಥಿತಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದರು. ಭಾರತ ಅದುವರೆಗೆ ಪಾಕಿಸ್ತಾನದ ವಿರುದ್ಧ ಅವರದೇ ನೆಲದಲ್ಲಿ ಎಂದೂ ಗೆದ್ದಿರಲಿಲ್ಲ. ವೀರೇಂದ್ರ ಸೆಹವಾಗ್ ಅವರ ತ್ರಿಶತಕದ ಅಬ್ಬರದ ನೆರವಿನಿಂದ ಭಾರತ ಬೃಹತ್ ಮೊತ್ತವನ್ನು ಪೇರಿಸಿತು. ಇದೇ ಇನ್ನಿಂಗ್ಸ್‌ನಲ್ಲಿ ಸಚಿನ್ ಅವರು ೧೯೪ ರನ್ ಗಳಿಸಿ ದ್ವಿಶತಕದ ಹೊಸ್ತಿಲಲ್ಲಿದ್ದರು. ಆದರೆ ತಂಡದ ಗೆಲುವಿಗಾಗಿ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡರು. ಸಚಿನ್ ಅವರ ವೈಯಕ್ತಿಕ ಸಾಧನೆಗಿಂತ ಪಾಕಿಸ್ತಾನದ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಗೆಲ್ಲುವ ಅವಕಾಶ ಅವರಿಗೆ ಮುಖ್ಯವಾಗಿತ್ತು. ಇದು ಅವರ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಕೇವಲ ಆಟಗಾರನಲ್ಲ, ಅದ್ಭುತ ಮಾರ್ಗದರ್ಶಕ

ನಿವೃತ್ತಿಯ ನಂತರವೂ ದ್ರಾವಿಡ್ ಅವರು ಇತರರಂತೆ ಕೇವಲ ವೀಕ್ಷಕ ವಿವರಣೆಗೆ ಅಥವಾ ವ್ಯಾಪಾರ ವಹಿವಾಟು ಮಾಡುವುದಕ್ಕೆ ಸೀಮಿತವಾಗಲಿಲ್ಲ. ಬದಲಿಗೆ ಇಂಡಿಯಾ-ಎ ಮತ್ತು ಅಂಡರ್-೧೯ ತಂಡಗಳ ಕೋಚ್ ಆಗಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಗಳನ್ನು ರೂಪಿಸಿದರು.

ಭಾಷಾ ಗೌರವ ಮತ್ತು ಸಂಸ್ಕೃತಿ

ಮೂಲತಃ ಮಧ್ಯಪ್ರದೇಶದ ಇಂದೋರಿನವರಾದ ದ್ರಾವಿಡ್, ಆರಂಭದಲ್ಲಿ ಕರ್ನಾಟಕ ತಂಡದ ಪರ ಕ್ರಿಕೆಟ್ ಆಡುತ್ತಿರುವಾಗ ಅಷ್ಟಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಕನ್ನಡವನ್ನು ಕಲಿತು ಮಾತನಾಡಲು ಆರಂಭಿಸಿದರು. ತಾನು ವಾಸಿಸುವ ನೆಲದ ಭಾಷೆಗೆ ಗೌರವ ನೀಡುವ ಮೂಲಕ, ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ಜೀವನ ಕಟ್ಟಿಕೊಂಡಿರುವವರಿಗೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಹೇಗೆ ಗೌರವ ಕೊಡಬೇಕು ಎಂಬುದಕ್ಕೆ ಅವರು ದೊಡ್ಡ ಪ್ರೇರಣೆಯಾಗಿದ್ದಾರೆ

ಸಾಮಾನ್ಯತೆಯಲ್ಲಿ ಅಸಾಮಾನ್ಯ ವ್ಯಕ್ತಿತ್ವ
ಭಾರತ ಕ್ರಿಕೆಟ್ ತಂಡದ ನಾಯಕ, ತರಬೇತುದಾರ ಮುಂತಾದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಸಹ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಾರೆ. ೨೦೧೭ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವು ರಾಹುಲ್ ದ್ರಾವಿಡ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದಾಗ, ದ್ರಾವಿಡ್ ಅವರು ಅದನ್ನು ನಯವಾಗಿ ನಿರಾಕರಿಸಿ, ಕ್ರೀಡಾ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆಯ ಮೂಲಕ ಡಾಕ್ಟರೇಟ್ ಪಡೆಯುವುದಕ್ಕೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.


ಮೈಸೂರಿನ ಮಾನಸಗಂಗೋತ್ರಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸ್ಥಳೀಯ ಪಂದ್ಯಾವಳಿಯೊಂದರಲ್ಲಿ ದ್ರಾವಿಡ್ ಅವರ ಮಗ ಆಟವಾಡುತ್ತಿದ್ದ. ಅಂದು ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದರು. ಆದರೂ ಅವರು ಸಾಮಾನ್ಯ ತಂದೆಯಂತೆ ಕ್ರೀಡಾಂಗಣದ ಕಲ್ಲು ಬೆಂಚಿನ ಮೇಲೆ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇಂತಹ ನಡೆಯ ಮೂಲಕವೇ ಅವರು ಸಾಮಾನ್ಯತೆಯಲ್ಲೇ ಅಸಾಮಾನ್ಯತೆಯನ್ನು ಮೆರೆದರು.

ಕೊನೆಯ ಮಾತು: ರಾಹುಲ್ ದ್ರಾವಿಡ್ ಕೇವಲ ಒಬ್ಬ ಕ್ರಿಕೆಟಿಗರಲ್ಲ; ಅವರು ತಾಳ್ಮೆ, ಸೌಜನ್ಯ ಮತ್ತು ನಿಸ್ವಾರ್ಥತೆಯ ಸಾಕಾರ ರೂಪ. ಇಂದಿನ ಯುವಕರಿಗೆ ದ್ರಾವಿಡ್ ಅವರ ಜೀವನವೇ ಒಂದು ದೊಡ್ಡ ಸ್ಫೂರ್ತಿ. ಇಂದು ನಮ್ಮ ಯುವಕರಿಗೆ ಸ್ಫೂರ್ತಿಯಾಗಬೇಕಾಗಿರುವವರು ರಾಹುಲ್ ದ್ರಾವಿಡ್ ಅವರಂತಹ ನಿಸ್ವಾರ್ಥ ವ್ಯಕ್ತಿಗಳು. ನಿಜಕ್ಕೂ ರಾಹುಲ್ ದ್ರಾವಿಡ್ ಮಿಕ್ಕೆಲ್ಲ ಕ್ರಿಕೆಟ್ ಆಟಗಾರರಿಗಿಂತ ಭಿನ್ನರು. ರಾಹುಲ್ ದ್ರಾವಿಡ್ ಕರ್ನಾಟಕ ಕ್ರಿಕೆಟ್ ಹಾಗೂ ಭಾರತ ಕ್ರಿಕೆಟ್‌ಗೆ ಸಿಕ್ಕ ಅಮೂಲ್ಯ ರತ್ನ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧