ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

 

ಪುಷ್ಪಕ ವಿಮಾನ ಎಂಬ ಮೂಕಿ ಚಿತ್ರ ೧೯೮೭ರಲ್ಲಿ ಬಿಡುಗಡೆಯಾಯಿತು. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ, ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾ ಭಾರತೀಯ ಸಿನೆಮಾದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಭಾಷೆಯ ಅಂತರಗಳೆಲ್ಲವನ್ನೂ ಮೀರಿ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಕಲಾವಿದರು ಹಾಗೂ ತಂತ್ರಜ್ಞರ ಸಂಯುಕ್ತ ಪ್ರಯತ್ನದಿಂದ ಈ ಸಿನಿಮಾ ತಯಾರಾದದ್ದು ಒಂದು ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವೇ ಸರಿ ಮತ್ತು ವೈವಿಧ್ಯಮಯ ಸಂಸ್ಕೃತಿಯ ಸಂಕೇತವಾದ ನಮ್ಮ ಬೆಂಗಳೂರಿನಲ್ಲಿ ಈ ಸಿನಿಮಾ ತಯಾರಾಗಿದ್ದು ನಿಜಕ್ಕೂ ಕಾಕತಾಳೀಯ.

ಇಂದು ನಮ್ಮ ಬೆಂಗಳೂರಿನಲ್ಲಿ ಭಾಷೆಯ ವಿಷಯವಾಗಿ ಆಗಾಗ್ಗೆ ಉಂಟಾಗುವ ವಿವಾದಗಳ ನಡುವೆ — ಪುಷ್ಪಕ ವಿಮಾನ ಸಿನಿಮಾದ “ಮೂಕತೆ” ನಮಗೆ ಒಂದು ಗಾಢವಾದ ಸಂದೇಶ ನೀಡುತ್ತದೆ. ಎಲ್ಲ ಭಾಷೆಯ ಜನರನ್ನು ಒಗ್ಗೂಡಿಸುವ ಬೆಂಗ್ಳೂರಿನ ಆತ್ಮವನ್ನು ಪುಷ್ಪಕ ವಿಮಾನ ಸಿನಿಮಾ ಮೌನವಾಗಿ ಪ್ರತಿನಿಧಿಸುತ್ತದೆ.

ಈ ಚಿತ್ರದ ಬಹುಪಾಲು ಚಿತ್ರೀಕರಣಗೊಂಡಿದ್ದು ಬೆಂಗಳೂರಿನ ಹೃದಯಭಾಗದಲ್ಲಿರುವ ITC Windsor Manor ಹೋಟೆಲಿನಲ್ಲಿ. ಬ್ರಿಟಿಷ್ ಕಾಲೋನಿಯಲ್ ಶೈಲಿಯಲ್ಲಿ ನಿರ್ಮಿತ ಈ ಹೋಟೆಲ್, ಇಂದಿಗೂ ಬೆಂಗಳೂರಿನ ರಾಜಶ್ರೇಯದ, ಶ್ರೇಷ್ಟ ಸೊಗಸಿನ ಪ್ರತೀಕವಾಗಿದೆ. ಹಳೆಯ ಬೆಂಗಳೂರು ಮತ್ತು ಬ್ರಿಟಿಷರ ಕಾಲದ ವಾಸ್ತುಶಿಲ್ಪದ ಸಂಯೋಜನೆಯಂತಿದೆ ಇದರ ವಿನ್ಯಾಸ.

ಪುಷ್ಪಕ ವಿಮಾನದಲ್ಲಿನ ಅತ್ಯಂತ ಪ್ರಸಿದ್ಧ ದೃಶ್ಯಗಳಲ್ಲಿ — ಕಮಲ್ ಹಾಸನ್ ಮತ್ತು ಭಿಕ್ಷುಕ ಪಾತ್ರದಾರಿ ನಡುವಿನ ಸೇತುವೆ ದೃಶ್ಯಗಳು . ಆ ಸೇತುವೆ ಕಟ್ಟಿಸಿರುವುದೇ ವಿಂಡ್ಸರ್ ಮ್ಯಾನರ್ ಹೋಟೆಲ್‌ನವರು ತಮ್ಮ ಅತಿಥಿಗಳಿಗಾಗಿ. ಇಂದು ಆ Windsor Bridge ಹೋಟೆಲ್‌ನಷ್ಟೇ ಪ್ರಸಿದ್ಧವಾಗಿದೆ. ಸಿನಿಮಾದಲ್ಲಿನ ಆ ದೃಶ್ಯಗಳು ಇಂದಿನ ಬೆಂಗಳೂರು ಜನ ಜೀವನದ ಅಂತರಂಗವನ್ನು ಎಚ್ಚರಿಸುತ್ತವೆ.

ಹೋಟೆಲ್ ಮುಂಭಾಗದಲ್ಲಿ ನಿಂತಿರುವ ೧೦೦ ವರ್ಷಕ್ಕಿಂತ ಹಳೆಯದಾದ ಮರ — ಬೆಂಗಳೂರಿನ ಪರಿವರ್ತನೆಯ ಮೂಕ ಸಾಕ್ಷಿ. ಬ್ರಿಟಿಷರ ವಸಾಹತು ಕಾಲದಿಂದ “Pensioner's Paradise” ಆಗಿದ್ದ Garden City ಇಂದಿನ ಸಿಲಿಕಾನ್ ವ್ಯಾಲಿಯಾಗಿ ಮಾರ್ಪಟ್ಟ ಪರಿವರ್ತನೆಗೆ ಅದು ಸಾಕ್ಷಿಯಾಗಿದೆ.

ITC Windsor ಗೆ ಕಾಲಿಟ್ಟ ಕ್ಷಣದಲ್ಲಿ ಪುಷ್ಪಕ ವಿಮಾನ ಚಿತ್ರದ ನೆನಪು, ಹಳೆ ಬೆಂಗಳೂರಿನ ಸಂಸ್ಕೃತಿ, ಇಂದಿನ ನಗರದ ಸ್ಪಂದನೆ — ಎಲ್ಲವೂ ಒಂದೇ ಸಮಯದಲ್ಲಿ ಮನಸ್ಸನ್ನು ತುಂಬುತ್ತವೆ
ಇಲ್ಲಿ ಮೌನವೇ ಮಾತಾಡುತ್ತದೆ — ಪುಷ್ಪಕ ವಿಮಾನದ ಭಾಷೆಯಲ್ಲಿ.

Comments

Popular posts from this blog

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧