PVR Director's Cutನಲ್ಲಿ ಕಾಂತಾರ ಚಾಪ್ಟರ್ ೧

 

PVR Director's Cutನಲ್ಲಿ ಒಂದಿಷ್ಟು ಅನುಭವ!

ಕಾಂತಾರ ಚಾಪ್ಟರ್ ೧ ನೋಡಲು ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿರುವ Forum Rex Walk (ಹಿಂದೆ ಇಲ್ಲಿ ಪ್ರಸಿದ್ಧ ರೆಕ್ಸ್ ಚಿತ್ರಮಂದಿರ ಇತ್ತು) ಗೆ ತೆರಳಿದ್ದೆ. ಇಲ್ಲಿ ಈಗ ಪಿವಿಆರ್ ಸಂಸ್ಥೆಯ ‘Director's Cut’ ಎಂಬ ಹೆಸರಿನ ಮಲ್ಟಿಪ್ಲೆಕ್ಸ್ ಇದೆ. ಇದು ಸಾಮಾನ್ಯ ಮಲ್ಟಿಪ್ಲೆಕ್ಸ್ ಅಲ್ಲ — ನಿಜಕ್ಕೂ ಲಕ್ಸುರಿ ಮಲ್ಟಿಪ್ಲೆಕ್ಸ್!

ದೇಶದಲ್ಲಿ ಮುಂಬೈ ಮತ್ತು ದೆಹಲಿಯ ನಂತರ ಇಂತಹ luxury ಮಲ್ಟಿಪ್ಲೆಕ್ಸ್ ಇರುವುದು ಬೆಂಗಳೂರಿನಲ್ಲಿ ಮಾತ್ರ ಎಂಬುದು ಹೆಮ್ಮೆಯ ವಿಷಯ.

ನಾನು ಮೈಸೂರಿನ ಗಾಯತ್ರಿ, ಸರಸ್ವತಿ, ಶಾಂತಲಾ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ನೋಡುತ್ತಿದ್ದವನು. ಬೆಂಗಳೂರಿಗೆ ಬಂದ ಮೇಲೆ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗಳನ್ನು ನೋಡಿದ್ದೆ. ಆದರೆ ಈ Director's Cut ನೀಡಿದ ಅನುಭವ – ನಿಜಕ್ಕೂ ಅದ್ಭುತ! ನನ್ನ ತಿಳುವಳಿಕೆಯ ಪ್ರಕಾರ, ಕಾಂತಾರ ಚಾಪ್ಟರ್ ೧ ಇಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ. ಟಿಕೆಟ್ ದರವು ಸಹ ಸಾಮಾನ್ಯ ಮಲ್ಟಿಪ್ಲೆಕ್ಸ್‌ಗಳಿಗಿಂತ ದುಬಾರಿ — ಆದರೆ ಅನುಭವವನ್ನು ನೋಡಿದರೆ ಅದರ ಬೆಲೆ ತಪ್ಪಲ್ಲವೆನಿಸುತ್ತದೆ.

ಇಲ್ಲಿ Wash Roomನಿಂದ ಹಿಡಿದು ಪರದೆವರೆಗೂ — ಎಲ್ಲವೂ ಅಚ್ಚರಿ ಹುಟ್ಟಿಸುವಂತಿದೆ. ನಿಜಕ್ಕೂ ಇಂದ್ರಲೋಕವೇ ಧರೆಗೆ ಇಳಿದು ಬಂದಂತೆ!

ಮಲ್ಟಿಪ್ಲೆಕ್ಸ್ ಪ್ರವೇಶದ್ವಾರದಲ್ಲೇ ಡಾ. ರಾಜಕುಮಾರ್, ಪುನೀತ್ ರಾಜಕುಮಾರ್, ವಿಷ್ಣುವರ್ಧನ್ ಅವರ ಫೋಟೋಗಳು ಕಾಣಿಸಿಕೊಂಡಾಗ ಮನಸ್ಸು ತುಂಬಿ ಬಂದಿತು. ಮೆಟ್ಟಿಲುಗಳ ಬಳಿ ಶಂಕರನಾಗ್ ಅವರ ಚಿತ್ರ ಕಂಡಾಗ ಖುಷಿ ಇನ್ನಷ್ಟು ಆಯಿತು. ಆದರೆ ಒಳಗೆ ಹೋದಾಗ — ಇದು ಸ್ವಲ್ಪ “ಕನ್ನಡಿಗರ ಕಣ್ಣೊರಿಸುವ ತಂತ್ರಗಾರಿಕೆ” ಎಂಬುದು ಮನದಲ್ಲಿ ಮೂಡಿತು. ಒಳಗೆ ತುಂಬಾ ಇಂಗ್ಲಿಷ್ ಸಿನಿಮಾದ ತಂತ್ರಜ್ಞರು ಹಾಗೂ ಕಲಾವಿದರ ಫೋಟೋಗಳು ತುಂಬಿದ್ದವು.

ಅದರಲ್ಲೇನು ತಪ್ಪಿಲ್ಲ — ಪ್ರತಿಭೆಗೆ ಭಾಷೆಯ ತಡೆಗೋಡೆ ಬೇಡ. ಆದರೆ ಕನ್ನಡದ ಇನ್ನಷ್ಟು ಶ್ರೇಷ್ಠ ತಂತ್ರಜ್ಞರು ಮತ್ತು ಕಲಾವಿದರ ಚಿತ್ರಗಳು ಇದ್ದಿದ್ದರೆ ಮನಸ್ಸಿಗೆ ಇನ್ನಷ್ಟು ಹಿತವಾಗುತ್ತಿತ್ತು. ನಮ್ಮ ನಾಡಿನಲ್ಲೇ ನಮ್ಮ ಸಾಧಕರಿಗೆ ಸ್ಥಳ ನೀಡದಿದ್ದರೆ, ಬೇರೆ ನಾಡುಗಳಲ್ಲಿ ಇವರ ಚಿತ್ರಗಳನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?

ಪಿವಿಆರ್ ಮಾದರಿಯ ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಕೇವಲ ವ್ಯಾಪಾರವಾಗಿರಬಹುದು. ಆದರೆ ನಮ್ಮ ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗಳು ಇಂತಹ ವಿಷಯಗಳ ಕಡೆ ಸೂಕ್ತ ಗಮನಹರಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ Identityಗೆ  ಆಪತ್ತು ಒದಗುವ ಸಂಭವವಿದೆ.


🎬 ಕಾಂತಾರ ಚಾಪ್ಟರ್ ೧ — ಅದ್ಭುತ ದೃಶ್ಯಕಾವ್ಯ!

ಈಗ ಸಿನಿಮಾದ ಕಡೆ ಬಂದ್ರೆ — ಕಾಂತಾರ ಚಾಪ್ಟರ್ ೧ ಒಂದು ಅದ್ಭುತ ದೃಶ್ಯಕಾವ್ಯ. ಇಂತಹ ಚಿತ್ರವನ್ನು ನೋಡಲು Director's Cut ನಂತಹ ಸ್ಥಳವೇ ಸೂಕ್ತವಾದದ್ದು.

ರಿಷಬ್ ಶೆಟ್ಟಿ – ನಿರ್ದೇಶಕ ಮತ್ತು ನಟನಾಗಿ ನಿಜಕ್ಕೂ ಅಪಾರ ಪ್ರತಿಭಾನ್ವಿತರು.
ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಕೆಲಸ ಪ್ರಶಂಸನೀಯ.

೯೦ರ ದಶಕದಲ್ಲಿ ನಾವು “ಮಣಿರತ್ನಂ, ಶಂಕರ್, ರಹಮಾನ್” ಅವರಂತಹ ಪ್ರತಿಭಾವಂತರನ್ನು ನೋಡಿ ಕನ್ನಡದಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಕೇಳುತ್ತಿದ್ದೆವು. ಆದರೆ ಇಂದು, ರಿಷಬ್ ಶೆಟ್ಟಿ, ಅರವಿಂದ್ ಕಶ್ಯಪ್, ಅಜನೀಶ್ ಲೋಕನಾಥ್ ಎಂಬ ಹೆಸರಗಳು ನಮ್ಮೊಳಗೇ ಬೆಳಗುತ್ತಿವೆ ಎಂಬುದು ಅಪಾರ ಸಂತೋಷದ ವಿಷಯ.

ಇವರ ಸಾಧನೆ ಇನ್ನಷ್ಟು ಯುವಕರಿಗೆ ಪ್ರೇರಣೆ ಆಗಿ, ಕನ್ನಡ ಚಿತ್ರರಂಗ ಮತ್ತಷ್ಟು ಎತ್ತರಕ್ಕೇರಲಿ. ಕನ್ನಡ ಚಿತ್ರರಂಗ ಈಗ ಯಾವುದೇ ಭಾಷೆಯ ಚಿತ್ರರಂಗಕ್ಕಿಂತ ಕಡಿಮೆ ಇಲ್ಲ — ಅದನ್ನು ಕಾಂತಾರ ಚಾಪ್ಟರ್ ೧ ಮತ್ತೊಮ್ಮೆ ಸಾಬೀತುಪಡಿಸಿದೆ!

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ