ಬದಲಾದ ಕನ್ನಡ ಚಿತ್ರರಂಗ



ಕನ್ನಡ ಚಿತ್ರರಂಗದ ಬದಲಾವಣೆಯ ಕಥೆ
ಮೇಲಿನ ಹಳೆಯ ಪೋಸ್ಟರ್ಗಳನ್ನು ನೋಡುತ್ತಿದ್ದರೆ — ಇದು ಇಂದು ಸಾಧ್ಯವೇ? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಹೌದು, ಕನ್ನಡ ಚಿತ್ರರಂಗ ಬಹಳಷ್ಟು ಬದಲಾಗಿದೆ.
ಒಂದು ಕಾಲದಲ್ಲಿ ಮೆಜೆಸ್ಟಿಕ್ ಪ್ರದೇಶದಲ್ಲಿ ಹೆಜ್ಜೆಗೆ ಒಂದರಂತೆ ಸಿನಿಮಾ ಥೀಯೇಟರ್‌ಗಳು ಇದ್ದವು. ರಾಜಕುಮಾರ್ ಅವರ ಸಿನೆಮಾಗಳನ್ನು ನೋಡಲು ಹಳ್ಳಿಯ ಜನರು ಎತ್ತಿನಗಾಡಿಗಳನ್ನು ಕಟ್ಟಿಕೊಂಡು ಹತ್ತಿರದ ಪಟ್ಟಣದ ಚಿತ್ರಮಂದಿರಗಳಿಗೆ ತೆರಳುತ್ತಿದ್ದರು. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಸದಾ ಹೆಂಗಳೆಯರ ಮನಮಿಡಿಯುವ, ಭಾವನಾತ್ಮಕ ಚಿತ್ರಗಳಾಗಿದ್ದವು.
ಆದರೆ ಮನೆ ಮನೆಗೂ ಟಿವಿಗಳು ಮತ್ತು ಖಾಸಗಿ ವಾಹಿನಿಗಳು ಪ್ರವೇಶಿಸಿದ ನಂತರ, ಗಾಂಧಿನಗರದ ಅನೇಕ ಚಿತ್ರಮಂದಿರಗಳು ನಿಧಾನವಾಗಿ ಶಾಪಿಂಗ್ ಕಾಂಪ್ಲೆಕ್ಸುಗಳಾಗಿ ಬದಲಾಗಿದವು. ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಅನೇಕ ಥೀಯೇಟರ್‌ಗಳು ಬಾಗಿಲು ಮುಚ್ಚಿಕೊಂಡವು.
ಇದೀಗ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಮೊದಲಾದ ನಗರಗಳಲ್ಲಿ “ಮಲ್ಟಿಪ್ಲೆಕ್ಸ್ ಸಂಸ್ಕೃತಿ” ಬೆಳೆಯಿತು. ಪಿವಿಆರ್ ಮತ್ತು ಐನಾಕ್ಸ್‌ಂತಹ ಕಾರ್ಪೊರೇಟ್ ಸಂಸ್ಥೆಗಳು ಚಿತ್ರರಂಗದ ವಲಯವನ್ನು ಹಿಡಿದು ಇಟ್ಟುಕೊಂಡಿವೆ ಎಂದು ಹೇಳಿದರೂ ತಪ್ಪಾಗುವುದಿಲ್ಲ.
ಇಂದು ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ಂತಹ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಸಿನೆಮಾವನ್ನು ಖರೀದಿಸಿ, ಕೇವಲ ಬಿಡುಗಡೆಗೊಂಡು ಒಂದು ತಿಂಗಳೊಳಗೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶಿಸುತ್ತಿವೆ.
ಒಂದು ಕಾಲದಲ್ಲಿ ಟಿವಿಗಾಗಿಯೇ ಚಿತ್ರಗಳು ನಿರ್ಮಾಣವಾಗುತ್ತಿದ್ದವು. ಈಗ KGF ಮತ್ತು ಅವನೇ ಶ್ರೀಮನ್ನಾರಾಯಣ ಮುಂತಾದ ಚಿತ್ರಗಳು ದೊಡ್ಡ ಹೈಪ್ ಸೃಷ್ಟಿಸಿ ಕೇವಲ ಎರಡು ವಾರಗಳಲ್ಲಿ ಬಂಡವಾಳ ವಾಪಸ್ ಪಡೆದು, ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಅಥವಾ ಟಿವಿ ವಾಹಿನಿಗಳಿಗೆ ಮಾರಾಟವಾಗಿ ಲಾಭ ಗಳಿಸುತ್ತಿವೆ.
ಇಂದಿನ ಸಿನಿಮಾ — ಹಿಂದಿನಂತ ನಿಜವಾದ ಕಲೆ, ಮನಸ್ಸು ಕದ್ದ ಕನಸಿನ ಲೋಕವಲ್ಲ; ಅದು ನಿಧಾನವಾಗಿ “ಫಾಸ್ಟ್ ಫುಡ್” ತರದ ಮನರಂಜನೆಯಾಗಿ ರೂಪಾಂತರಗೊಂಡಿದೆ.

ಸಿನಿಮಾ — ಕೇವಲ ಚಿತ್ರವಲ್ಲ, ಒಂದು ಅನುಭವ
ನನ್ನ ಪ್ರಕಾರ, ಸಿನಿಮಾ ಎಂದರೆ ಕೇವಲ ಕಥೆ ಅಥವಾ ಮನರಂಜನೆ ಅಲ್ಲ — ಅದು ಒಂದು ಅನುಭವ.
ನಮಗೆ ಬಂಗಾರದ ಮನುಷ್ಯನ ರಾಜೀವಪ್ಪ ಆದರ್ಶವಾಗುತ್ತಾನೆ, ಓಂನ ಸತ್ಯ ಕಾಡುತ್ತಾನೆ, ಶರಪಂಜರದ ನಾಯಕಿ ಕರುಣೆ ಉಕ್ಕಿಸುತ್ತಾಳೆ.
ಮುಂಗಾರು ಮಳೆಯ ಜೋಗ ಜಲಪಾತದ ದೃಶ್ಯ ವೈಭವ ಅಥವಾ KGFನ ನರಾಚಿಯ ಭಯಾನಕತೆ — ಇವೆಲ್ಲವೂ ನಿಜವಾದ ಅನುಭವವಾಗುವುದು, ಆ ಕತ್ತಲ ಕೋಣೆಯ ರಜತ ಪರದೆಯ ಮೇಲೆ ಚಿತ್ರ ನೋಡಿದ ಮೇಲೆ. ಮನೆಯ ಟಿವಿಯ ಮೇಲೆ ಅಲ್ಲ.
ಇಂದು ಟಿವಿಗಳು “ಸ್ಮಾರ್ಟ್” ಆಗಿವೆ, ಪರದೆಗಳು ದೊಡ್ಡದಾಗಿವೆ, ಪ್ರೊಜೆಕ್ಟರ್‌ಗಳು ಸಹ ಸುಲಭವಾಗಿ ಸಿಗುತ್ತವೆ. ಆದರೆ ಜನರ ನಡುವೆ, ಕತ್ತಲ ಕೋಣೆಯಲ್ಲಿ, ಎಲ್ಲರೂ ಒಂದೇ ಉಸಿರಲ್ಲಿ ನಗುವ, ತಟ್ಟುವ, ಭಯಪಡುವ — ಆ ಕ್ಷಣವನ್ನು ನೀಡುವ ಅನುಭವಕ್ಕೆ ಬದಲಿ ಇಲ್ಲ.
ದುಃಖದ ಸಂಗತಿ ಏನೆಂದರೆ, ಇಂದು ಯಾವುದೇ ಸಿನಿಮಾ ಎರಡು ವಾರಗಳಿಗಿಂತ ಹೆಚ್ಚು ಕಾಲ ಥೀಯೇಟರ್‌ನಲ್ಲಿ ಉಳಿಯುವುದಿಲ್ಲ. ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರು ಎಲ್ಲರೂ ಬೇಗನೆ ಹಣ ವಾಪಸ್ ಪಡೆಯುವ ಹಾತೊರೆಯ ದಾವಂತದಲ್ಲಿ, ಪ್ರೇಕ್ಷಕನಿಗೆ ಸಿಗಬೇಕಾದ ಆ ಅದ್ಭುತ ಅನುಭವಕ್ಕೆ ಅಡ್ಡಗಾಲಾಗುತ್ತಿದ್ದಾರೆ.
ಈ ಬದಲಾಗುತ್ತಿರುವ ವ್ಯವಸ್ಥೆ, ಹೆಚ್ಚು ದುಡ್ಡು ಮಾಡುವ ದುರಾಸೆಯಿಂದ, ಪ್ರೇಕ್ಷಕನ ಮೇಲೆ ಪರೋಕ್ಷ ಒತ್ತಡವನ್ನು ಹಾಕುತ್ತಿದೆ.
ಅಂತಿಮವಾಗಿ, ಸಿನಿಮಾ ಎಂಬ ಮಾಯಾಲೋಕದ ಅವಿಸ್ಮರಣೀಯ ಅನುಭವವನ್ನು ಪ್ರೇಕ್ಷಕ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದ್ದಾನೆ.



Comments
Post a Comment