ಕರ್ನಾಟಕ ಕ್ರಿಕೆಟ್
ಭಾರತೀಯ ಕ್ರಿಕೆಟ್‌ಗೆ ಕರ್ನಾಟಕದ ಅಪ್ರತಿಮ ಕೊಡುಗೆ
ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪಾತ್ರ ಅಸಾಧಾರಣ. ಮುಂಬೈ ಮತ್ತು ದೆಹಲಿ ನಂತರ ಅತಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರನ್ನು ನೀಡಿರುವ ರಾಜ್ಯವೆಂದರೆ ಅದು ಕರ್ನಾಟಕ.
ಮುಂಬೈ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅಂತಹ ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ನೀಡಿದೆ. ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದು ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಪ್ರಭಾವ ಮೂಡಿಸಿದೆ. ದೆಹಲಿ ಬಿಷನ್ ಸಿಂಗ್ ಬೇಡಿ, ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹವಾಗ್ ಮೊದಲಾದ ತಾರೆಗಳನ್ನು ಭಾರತಕ್ಕೆ ಕೊಟ್ಟಿದೆ. ಆದರೆ ಕರ್ನಾಟಕ ವಿಭಿನ್ನ ಶೈಲಿ ಮತ್ತು ವಿಶಿಷ್ಟ ಪ್ರತಿಭೆಗಳ ಆಟಗಾರರನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ.
ಕ್ಲಾಸಿಕಲ್ ಆಫ್ ಸ್ಪಿನ್ನರ್ ಎರಪಳ್ಳಿ ಪ್ರಸನ್ನ, ಗೂಗ್ಲಿ ಸ್ಪೆಷಲಿಸ್ಟ್ ಭಗವತ್ ಚಂದ್ರಶೇಖರ್, ಕಲಾತ್ಮಕ ಬ್ಯಾಟ್ಸಮನ್ ಗುಂಡಪ್ಪ ವಿಶ್ವನಾಥ್, ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, ಮೈಸೂರಿನ ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್, ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಅನಿಲ್ ಕುಂಬ್ಳೆ, ಹಾಗೂ ಭಾರತದ ತಡೆಗೋಡೆ ರಾಹುಲ್ ದ್ರಾವಿಡ್ — ಇಂತಹ ಪ್ರತಿಭಾವಂತ ಆಟಗಾರರ ರಾಜ್ಯ ಕರ್ನಾಟಕ.
ಮುಂಬೈ ನಂತರ ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಕರ್ನಾಟಕ ತಂಡದ್ದು. ವಿಶ್ವನಾಥ್, ಕುಂಬ್ಳೆ ಮತ್ತು ದ್ರಾವಿಡ್ — ಇವರು ಭಾರತದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
೧೯೮೩ರ ವಿಶ್ವಕಪ್ ಗೆಲುವಿನಲ್ಲಿ, ಕರ್ನಾಟಕದ ಆಲ್‌ರೌಂಡರ್ ರೋಜರ್ ಬಿನ್ನಿ ಮತ್ತು ವಿಕೆಟ್ ಕೀಪರ್ ಕಿರ್ಮಾನಿ ಪ್ರಮುಖ ಪಾತ್ರವಹಿಸಿದರು. ೧೯೮೫ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸದಾನಂದ ವಿಶ್ವನಾಥ್ ತಾರೆಯಾಗಿ ಹೊರಹೊಮ್ಮಿದರು. ೨೦೦೭ರ ಮೊದಲ T20 ವಿಶ್ವಕಪ್‌ನಲ್ಲಿ ರಾಬಿನ್ ಉತ್ತಪ್ಪ ಅತ್ಯುತ್ತಮ ಪ್ರದರ್ಶನ ನೀಡಿದರು.
೧೯೯೬ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಹೋರಾಟ ಇಂದಿಗೂ ಕ್ರೀಡಾಭಿಮಾನಿಗಳ ಹೃದಯದಲ್ಲಿ ನೆನಪಾಗುತ್ತದೆ. ಕನ್ನಡಿಗ ವೆಂಕಟೇಶ್ ಪ್ರಸಾದ್ ಮತ್ತು ಪಾಕಿಸ್ತಾನದ ಆಮಿರ್ ಸೊಹೈಲ್ ನಡುವಿನ ಕಾಳಗ ಕ್ರಿಕೆಟ್ ಇತಿಹಾಸದಲ್ಲಿ ಅಕ್ಷರಶಃ ಅಚ್ಚೊತ್ತಿದೆ.
೧೯೭೧ರಲ್ಲಿ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚಂದ್ರಶೇಖರ್ ಅವರ ಲೆಗ್ ಸ್ಪಿನ್ ಮತ್ತು ಗೂಗ್ಲಿ ಬೌಲಿಂಗ್ ಮುಂದೆ ಕ್ರಿಕೆಟ್ ಜನಕ ಇಂಗ್ಲೆಂಡ್ ತತ್ತರಿಸಿತು. ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅವರನ್ನು “ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ ಯಾರು?” ಎಂದು ಕೇಳಿದಾಗ, ಅವರು ನಿಸ್ಸಂಶಯವಾಗಿ ಉತ್ತರಿಸಿದ ಹೆಸರು — ಎರಪಳ್ಳಿ ಪ್ರಸನ್ನ.
ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಶತಕ ಬಾರಿಸಿದಾಗ ಭಾರತ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬ ಅಂಕಿಅಂಶ cricinfo ವೆಬ್‌ಸೈಟ್‌ನಲ್ಲಿ ದಾಖಲಾಗಿದೆ. ಅದೇ ವೆಬ್‌ಸೈಟ್ ಪ್ರಕಾರ ಭಾರತದ ಸಾರ್ವಕಾಲಿಕ “ಮ್ಯಾಚ್ ವಿನ್ನರ್” ಎಂದರೆ ಗವಾಸ್ಕರ್ ಅಥವಾ ತೆಂಡೂಲ್ಕರ್ ಅಲ್ಲ — ಅದು ನಮ್ಮ ಕನ್ನಡದ ಹೆಮ್ಮೆ ಅನಿಲ್ ಕುಂಬ್ಳೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ನ ಎಲ್ಲ ಹತ್ತು ವಿಕೆಟ್ ಗಳನ್ನು ಪಡೆದ ಇಬ್ಬರಲ್ಲಿ ಒಬ್ಬರು ಇಂಗ್ಲೆಂಡ್‌ನ ಜಿಮ್ ಲೇಕರ್, ಮತ್ತೊಬ್ಬರು ನಮ್ಮ ಅನಿಲ್ ಕುಂಬ್ಳೆ.
೭೦ ಮತ್ತು ೯೦ರ ದಶಕಗಳಲ್ಲಿ, ಕರ್ನಾಟಕದಿಂದ ೬ ರಿಂದ ೭ ಆಟಗಾರರು ಏಕಕಾಲದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸುತ್ತಿದ್ದರು — ಇದು ರಾಜ್ಯದ ಕ್ರಿಕೆಟ್ ಪರಂಪರೆಯ ಮಹತ್ತ್ವವನ್ನು ತೋರಿಸುತ್ತದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಹೆಸರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನಸ್ವಾಮಿ ಅವರ ಗೌರವಾರ್ಥ. ಕರ್ನಾಟಕ ಕ್ರಿಕೆಟ್ ಅಭಿವೃದ್ಧಿಗೆ ಅವರ ಕೊಡುಗೆ ಅಸಾಧಾರಣವಾದದ್ದು.
ಭಾರತ ಕ್ರಿಕೆಟ್‌ನ ಏಳು ಬೀಳುಗಳಲ್ಲಿ ಕರ್ನಾಟಕದ ಪಾತ್ರ ಎಂದಿಗೂ ಪ್ರಮುಖವಾಗಿದೆ — ನಿಜಕ್ಕೂ ಕರ್ನಾಟಕ ಕ್ರಿಕೆಟ್‌ನ ಗೌರವ ಮತ್ತು ಪರಂಪರೆ ಅಪಾರ.

Comments
Post a Comment