ಅವನೇ ಶ್ರೀಮನ್ನಾರಾಯಣ ಚಲನಚಿತ್ರ ವಿಮರ್ಶೆ
ನಾನು ಇತ್ತೀಚಿನ ದಿನಗಳಲ್ಲಿ ನೋಡಿದ ಅದ್ಭುತ ಚಲನಚಿತ್ರ ಎಂದರೆ ಅದು "ಅವನೇ ಶ್ರೀಮನ್ನಾರಾಯಣ". ಈ ಸಿನಿಮಾವೇ ಒಂದು ಅನುಭವ ಎಂದರೆ ತಪ್ಪಾಗಲ್ಲ. ಈ ಚಿತ್ರದ ಪ್ರತಿಯೊಂದು ಪಾತ್ರವು ಅದ್ಭುತ. ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಂತೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇದು ಹಾಲಿವುಡ್ ಸಿನೆಮಾಗಳಿಂದ ಪ್ರೇರಿತಗೊಂಡಿದ್ದರೂ ಸಹ, ನಮ್ಮ ಮಣ್ಣಿನ ಸೊಗಡು ಸಹ ಈ ಚಿತ್ರಕ್ಕೆ ಇದೆ. ಸಿನಿಮಾದ ಕಥೆ ಸಾಧಾರಣವಾಗಿದ್ದರೂ ಸಹ, ಚಿತ್ರಕೆಥೆ ಅಂತೂ ಅದ್ಭುತವಾಗಿದೆ. ಈ ಚಿತ್ರ ನಮ್ಮನ್ನು ಪ್ರತಿ ಕ್ಷಣ ಕಾಡುತ್ತದೆ.ಒಬ್ಬ ಪ್ರೇಕ್ಷಕ ಖಂಡಿತವಾಗಿಯೂ ಈ ಸಿನಿಮಾದಲ್ಲಿ ಪಯಣಿಸುತ್ತಾನೆ. ಈ ಸಿನಿಮಾದ ನಿರ್ದೇಶಕ ಸಚಿನ್ ರವಿ ಅವರ ಮೊದಲ ಸಿನಿಮಾ ಅಂತ ಎಲ್ಲಿಯೂ ನಮಗೆ ಅನಿಸುವುದಿಲ್ಲ. ಅವರ ಸಂಕಲನ ಕೂಡ ಅಷ್ಟೇ ಚುರುಕಾಗಿದೆ.ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಅನುಭವ ಖಂಡಿತಾ ಸಚಿನ್ ರವಿ ಅವರಿಗೆ ಸಹಾಯ ಮಾಡಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಲಾವಿದರನ್ನು ಎಷ್ಟೇ ಮೆರೆಸಿದರೂ, ಈ ಸಿನೆಮಾವೆಂಬುದು ಸದಾ ತಂತ್ರಜ್ಞರ ಮಾಧ್ಯಮ ಎನ್ನುವುದು ಪದೇ ಪದೇ ರುಜುವಾತು ಪಡಿಸುತ್ತಲೇ ಇರುತ್ತದೆ. ನನ್ನ ಪ್ರಕಾರ ಈ ಸಿನಿಮಾದ ನಿಜವಾದ ಹೀರೋಗಳೆಂದರೆ, ಚಿತ್ರಕಥೆ ಬರೆದ ರಕ್ಷಿತ್ ಶೆಟ್ಟಿ ಮತ್ತವರ ಏಳು ಜನ ಗೆಳೆಯರು, ನಿರ್ದೇಶಕ ಸಚಿನ್ ರವಿ, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂಗೀತ ನಿರ್ದೇಶಕರಾದ ಅಜನೀಶ್ ಮತ್ತು ಚರಣರಾಜ್. ಈ ಚಿತ್ರದ ಪ್ರತಿ ಫ್ರೇಮ್ ಕೂಡ ಹೊಸತನದಿಂದ ಕೂಡಿದೆ. ಸಂಭಾಷಣೆ ಕೂಡ ಅದ್ಬುತ ಮತ್ತು ಸಾಹಸ ದೃಶ್ಯಗಳು ಕೂಡ ವಿಭಿನ್ನ ಮತ್ತು ಹೊಸತು. ಇನ್ನು ಕಲಾವಿದರಂತೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರತಿಯೊಂದು ಪಾತ್ರವು ಕೂಡ ಪ್ರಾಮುಖ್ಯವನ್ನು ಪಡೆದುಕೊಂಡಿವೆ. ಸಿನಿಮಾದ ಹಾಡುಗಳು ಕೂಡ ಚೆನ್ನಾಗಿವೆ.ಕನ್ನಡಕ್ಕಷ್ಟೇ ಇದು ವಿಭಿನ್ನ ಸಿನೆಮಾವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ವಿಭಿನ್ನ ಸಿನಿಮಾ ಎಂದರೆ ಅತಿಶಯೋಕ್ತಿ ಅಲ್ಲ.
ಬಿಡುವಾಗಿದ್ದರೆ ಈ ಸಿನೆಮಾವನ್ನು ಥೀಯೇಟರ್ ನಲ್ಲಿ ಕಣ್ಣುತುಂಬಿಕೊಂಡು ಬನ್ನಿ.
ಚಿತ್ರದ ಟ್ರೈಲರ್ ವೀಕ್ಷಿಸಲು ಕೆಳಗಿನ ಯು ಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=Dj-HNEZ59Z4&t=18s
ಚಿತ್ರವನ್ನು ಆನ್ಲೈನ್ ಬುಕ್ ಮಾಡಲು ಕೆಳಗಿನ ವೆಬ್ಸೈಟ್ಗೆ ಭೇಟಿ ಕೊಡಿ.
https://in.bookmyshow.com/buytickets/avane-srimannarayana-asn-bengaluru/movie-bang-ET00077148-MT/20200111

Comments
Post a Comment