Yellow ಮೆಟ್ರೋ ಲೈನ್ ಪ್ರಯಾಣದ ಅನುಭವ: ಸಮಯಪಾಲನೆ ಮತ್ತು ಕಾರ್ಯದಕ್ಷತೆ ಒಂದು ವಿಸ್ಮಯ!
ನಾನು ಇತ್ತೀಚೆಗೆ ಬೆಂಗಳೂರಿನ ಯೆಲ್ಲೋ ಮೆಟ್ರೋ ಲೈನ್‌ನಲ್ಲಿ (Yellow Metro Line) ಪ್ರಯಾಣಿಸಿದಾಗ, ಒಂದು ಕ್ಷಣ ಮೂಕವಿಸ್ಮಿತನಾದೆ. ನಮ್ಮ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಈ ಮಟ್ಟದ ಸಮಯಪಾಲನೆ (Punctuality) ಮತ್ತು ಕಾರ್ಯದಕ್ಷತೆ ಸಾಧ್ಯವೇ ಎಂದು ಆಶ್ಚರ್ಯವಾಯಿತು!
ಇದಕ್ಕೆ ಮೊದಲು ನನಗೆ ನೆನಪಾಗಿದ್ದು ನಟ-ನಿರ್ದೇಶಕ ಉಪೇಂದ್ರ ಅವರ 'ಆಪರೇಷನ್ ಅಂತ' ಚಿತ್ರದ ಒಂದು ದೃಶ್ಯ. ಆ ದೃಶ್ಯದಲ್ಲಿ, ಅಮೆರಿಕದಿಂದ ಬಂದ ನಾಯಕಿ ಬಸ್‌ಗಾಗಿ ಕಾಯುತ್ತಾ ನಿಂತಿರುತ್ತಾಳೆ. ಆದರೆ ಬಸ್ ಸಮಯಕ್ಕೆ ಬರುವುದಿಲ್ಲ, ಅಲ್ಲದೆ ಬಸ್ ನಿಲುಗಡೆಗೆ ಕಾಯ್ದಿರಿಸಿದ ಜಾಗದಲ್ಲಿಯೂ ನಿಲ್ಲುವುದಿಲ್ಲ. ಆಗ ಅಲ್ಲೇ ನಿಂತಿದ್ದ ಸ್ಥಳೀಯ ಪ್ರಯಾಣಿಕನನ್ನು ನಾಯಕಿ ಕೇಳಿದಾಗ ಆತ ಹೇಳುವ ಮಾತು: "BTS (ಬಿಎಂಟಿಸಿ ಹಳೆಯ ಹೆಸರು) ಅಂದರೆ, ಬಿಟ್ಟರೆ ತಿರುಗಿದರೂ ಸಿಗಲ್ಲ!"
ನಾವು ಸಣ್ಣವರಾಗಿದ್ದಾಗ(ಬಾಲ್ಯದಲ್ಲಿದ್ದಾಗ), ಜಪಾನ್‌ನಂತಹ ದೇಶಗಳಲ್ಲಿ ರೈಲು ಅಥವಾ ಬಸ್ಸುಗಳು ಒಂದು ನಿಮಿಷ ಇರಲಿ, ಒಂದು ಸೆಕೆಂಡ್ ಕೂಡ ತಡವಾಗಿ ಬರುವುದಿಲ್ಲ ಎಂದು ಕೇಳಿ ಆಶ್ಚರ್ಯವಾಗುತ್ತಿತ್ತು. ನಮ್ಮ ಭಾರತದ ರೈಲುಗಳು ಹಿಂದೆ ಗಂಟೆಗಟ್ಟಳೆ ತಡವಾಗುತ್ತಿದ್ದವು (ಈಗ ಪರಿಸ್ಥಿತಿ ಸುಧಾರಿಸಿರಬಹುದು, ಆದರೆ ನಗರ ಸಾರಿಗೆ ಬಸ್ಸುಗಳಂತೂ ಸಮಯಕ್ಕೆ ಬಂದಿದ್ದು ನಾನು ನೋಡಿಯೆ ಅಥವಾ ಕೇಳಿಯೆ ಇಲ್ಲ). ಇಂದಿಗೂ ಅನೇಕ ಹಳ್ಳಿಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಬಸ್ ಇವೆ ಎಂಬ ವರದಿಗಳನ್ನು ಓದುತ್ತೇವೆ.
🌟 ಮೆಟ್ರೋ ಒಂದು ಅದ್ಭುತ ಉತ್ತರ!
ಆದರೆ, ನಮ್ಮ ಮೆಟ್ರೋ ಈ ಮೇಲಿನ ಎಲ್ಲ ಸಮಸ್ಯೆಗಳಿಗೂ ಉತ್ತರ ನೀಡಿದೆ.
ಖಚಿತ ಮಾಹಿತಿ: ಮೆಟ್ರೋ ರೈಲು ನಿಖರವಾಗಿ ಎಷ್ಟು ಹೊತ್ತಿಗೆ ಸ್ಟೇಷನ್‌ಗೆ ಬರುತ್ತೆ ಎಂಬುದನ್ನು display ಬೋರ್ಡ್‌ನಲ್ಲಿ ತೋರಿಸುತ್ತದೆ.ಟಿಕೆಟ್ ನೀಡುವುದರಿಂದ ಹಿಡಿದು ಸಂಪೂರ್ಣ ಮಾಹಿತಿ ಕಂಪ್ಯೂಟರೀಕರಣಗೊಂಡಿದೆ.ಪ್ರಯಾಣಿಕರಿಗೆ ಬೇಕಾಗುವ ಪ್ರತಿಯೊಂದು ಮಾಹಿತಿ ಸಹ ಲಭ್ಯವಿದೆ.
ಶಿಸ್ತು ಮತ್ತು ಸುರಕ್ಷತೆ: ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದಂತೂ ಸಾಧ್ಯವೇ ಇಲ್ಲ. ಮೆಟ್ರೋ ನಿಲ್ದಾಣಗಳು ಅತಿ ಸ್ವಚ್ಛವಾಗಿವೆ. ನಮ್ಮ ಸಾರ್ವಜನಿಕ ಸ್ಥಳಗಳನ್ನು ಸಹ ಉತ್ತಮವಾಗಿ ನಿರ್ವಹಿಸಬಹುದು ಎಂದು ಇದು ತೋರಿಸಿದೆ.ಹೆಜ್ಜೆ ಹೆಜ್ಜೆಗೂ ಭದ್ರತೆ ಇರುವ ಕಾರಣ ನಿಲ್ದಾಣ ಮತ್ತು ಪ್ರಯಾಣ ಸುರಕ್ಷಿತವಾಗಿದೆ.
ವ್ಯವಸ್ಥೆಯ ಶಿಸ್ತು: ಒಂದು ವ್ಯವಸ್ಥೆ ಕಟ್ಟುನಿಟ್ಟಾಗಿದ್ದರೆ, ದೇಶ ಮತ್ತು ಜನರು ಸಹ ಶಿಸ್ತುಬದ್ಧವಾಗಿ ಇರುತ್ತಾರೆ ಎನ್ನುವುದಕ್ಕೆ ನಮ್ಮ ಮೆಟ್ರೋ ಒಂದು ಅದ್ಭುತ ಉದಾಹರಣೆ.
ಸಾರ್ವಜನಿಕ ಪ್ರಯಾಣ ಎಂದರೆ ಅಶಿಸ್ತು, ಗೊಂದಲ, ಸಮಯಕ್ಕೆ ಬಾರದ ಬಸ್/ರೈಲು, ಅತಿಯಾದ ಜನಸಂದಣಿ ಮತ್ತು ಗಲೀಜು ಪ್ರದೇಶಗಳು ಇವೇ ನಮ್ಮ ಕಣ್ಣ ಮುಂದೆ ಬರುತ್ತಿದ್ದವು. ಆದರೆ ನಮ್ಮ ಮೆಟ್ರೋ ಈ ಎಲ್ಲ ನಕಾರಾತ್ಮಕ ಅಂಶಗಳಿಗೆ ಉತ್ತರ ನೀಡಿದೆ.
ಖ್ಯಾತ
ನಿರೂಪಕಿ ಅಪರ್ಣ ಅವರು ಅಕಾಲಿಕವಾಗಿ ನಮ್ಮನ್ನು
ಅಗಲುವ ಮೊದಲು, ಪ್ರಯಾಣಿಕರಿಗೆ ನಿರ್ದೇಶನ ನೀಡುವ ತಮ್ಮ ಧ್ವನಿಯನ್ನು ಕೊನೆಯದಾಗಿ
ದಾಖಲಿಸಿದ್ದು, ಈ ಮೆಟ್ರೊ ಮಾರ್ಗದ
ವಿಶೇಷತೆಗಳಲ್ಲೊಂದು.
🛠️ ಸುಧಾರಣೆಗಳು ಸಹ ಬೇಕು: ಪಾರ್ಕಿಂಗ್ ವ್ಯವಸ್ಥೆ
ಇಷ್ಟೆಲ್ಲಾ ಉತ್ತಮ ಕಾರ್ಯದಕ್ಷತೆಯ ನಡುವೆಯೂ, BMRCL (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಗಮನ ಹರಿಸಬೇಕಾದ ಪ್ರಮುಖ ವಿಷಯವೆಂದರೆ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ.
ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮಪಡಿಸಬೇಕಿದೆ. ಮಾಲ್‌ಗಳಲ್ಲಿ ಇರುವಂತಹ ವ್ಯವಸ್ಥಿತ ಪಾರ್ಕಿಂಗ್ (Systematic Parking) ಸೌಲಭ್ಯಗಳನ್ನು ಕಲ್ಪಿಸಿದರೆ, ಮೆಟ್ರೋ ನಿಲ್ದಾಣಗಳಲ್ಲಿನ ಕಿರಿಕಿರಿ ತಪ್ಪುತ್ತದೆ ಮತ್ತು ಇನ್ನಷ್ಟು ಜನರು ಮೆಟ್ರೋ ಬಳಸಲು ಪ್ರೋತ್ಸಾಹಿಸಿದಂತಾಗುತ್ತದೆ.
👑 ಶಂಕರ್ ನಾಗ್ ಅವರ ಕನಸಿನ ಕೂಸು
ಯೆಲ್ಲೋ(Yellow) ಮೆಟ್ರೋ ಲೈನ್‌ನಲ್ಲಿ ಪ್ರಯಾಣಿಸುವಾಗ ಸಿಂಗಸಂದ್ರ ಎನ್ನುವ ನಿಲ್ದಾಣ ಬರುತ್ತದೆ. ಇದೇ ಸಿಂಗಸಂದ್ರದಲ್ಲಿ ನಮ್ಮ ಕರುನಾಡಿನ ಅನರ್ಘ್ಯ ರತ್ನ, ದೂರದೃಷ್ಟಿಯ ವ್ಯಕ್ತಿ ಶಂಕರ್ ನಾಗ್ ಅವರು ವಾಸವಾಗಿದ್ದರು.
ಭಾರತಕ್ಕೆ ಮೆಟ್ರೋ ಬರುವ ಎಷ್ಟೋ ವರ್ಷಗಳ ಮುಂಚೆಯೇ, ವಿದೇಶಗಳಲ್ಲಿರುವ ಮೆಟ್ರೋ ವ್ಯವಸ್ಥೆ ನಮ್ಮ ಬೆಂಗಳೂರಿಗೆ ಬಂದರೆ ಬಹಳ ಅನುಕೂಲ ಎಂದು ಅವರು ಕನಸು ಕಂಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ಲಂಡನ್‌ನ ಮೆಟ್ರೋ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಗೆ ವರದಿಯನ್ನು ಸಹ ಸಲ್ಲಿಸಿದ್ದರು!
ಅವರ ದೂರದೃಷ್ಟಿ ಮತ್ತು ಪ್ರಯತ್ನಕ್ಕೆ ಗೌರವ ಸಲ್ಲಿಸುವ ಸಲುವಾಗಿ, ಈ ಸಂಪೂರ್ಣ ಯೆಲ್ಲೋ(Yellow) ಲೈನ್‌ಗೆ ಅವರ ಹೆಸರನ್ನು ಇಟ್ಟಿದ್ದರೆ, ಅದು ಒಂದು ಅತ್ಯಂತ ಸಾರ್ಥಕ ಗೌರವ (Fitting Tribute) ಆಗಿರುತ್ತಿತ್ತು. ಇದು ಮೆಟ್ರೋ ಬಗೆಗಿನ ಅವರ ಕನಸನ್ನು ನೆನಪಿಸಿದಂತಾಗುತ್ತಿತ್ತು.
ಯಲ್ಲೋ
ಮೆಟ್ರೊ ಲೈನ್ ಉದ್ಘಾಟನೆ ಸಂದರ್ಭದಲ್ಲಿಯೂ
ಸಹ ನಮ್ಮ ಜನಪ್ರತಿನಿಧಿಗಳು ಶಂಕರ್
ನಾಗ್ ಅವರನ್ನು ಸಂಪೂರ್ಣವಾಗಿ ಮರೆತಿದ್ದು ನಿಜಕ್ಕೂ ಬೇಸರದ ವಿಷಯ.

Comments
Post a Comment