ಇಷ್ಟಪಡದವರಿಗೆ ಸಾವಿರ ಕಾರಣ; ಪ್ರೀತಿಸುವವರಿಗೆ ಲಕ್ಷ ಕಾರಣ—ಇದು ನಮ್ಮ ಬೆಂಗಳೂರು!
ನಾಡಪ್ರಭು ಕೆಂಪೇಗೌಡರು ಹಾಕಿದ ಗಡಿಯನ್ನು ಮೀರಿ ಬೆಂಗಳೂರು ಇಂದು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಇಡೀ ಜಗತ್ತಿನಲ್ಲಿ ಹೆಚ್ಚು ಸಂಚಾರದಟ್ಟಣೆ (Traffic congestion) ಇರುವ ನಗರಗಳ ಪಟ್ಟಿಯಲ್ಲಿಯೂ ಬೆಂಗಳೂರು ಸ್ಥಾನ ಪಡೆದಿದೆ ಎಂಬುದು ಬೇಸರದ ಸಂಗತಿ.
ಕ್ಷಣಾರ್ಧದಲ್ಲಿ ಊಟ ಅಥವಾ ಇತರ ವಸ್ತುಗಳನ್ನು ಮನೆಗೆ ತಲುಪಿಸುವ ಸಲುವಾಗಿ ಇಲ್ಲಿನ ಬುದ್ಧಿವಂತ ಯುವಕರು ಪ್ರತಿ ದಿನ ಸಾವಿರಾರು ಅಪ್ಲಿಕೇಶನ್‌ಗಳನ್ನು ಸ್ಟಾರ್ಟ್ ಅಪ್ ಕಂಪನಿಗಳಿಗೆ ಮಾಡಿಕೊಡುತ್ತಾರೆ. ಆದರೆ ತಾವುಗಳೇ ಮನೆಗೆ ತೆರಳಲು ಗಂಟೆಗಟ್ಟಲೆ ಪರದಾಡುತ್ತಾರೆ ಎಂಬುದು ಎಷ್ಟು ಸತ್ಯವೋ ಅಷ್ಟೇ ವಿಚಿತ್ರ ಕೂಡ.
ಬೆಂಗಳೂರನ್ನು ಇಷ್ಟಪಡದೆ ಇರಲು ಸಾವಿರ ಕಾರಣ ಇರಬಹುದು, ಆದರೆ ಈ ನಗರವನ್ನು ಪ್ರೀತಿಸುವುದಕ್ಕೆ ಲಕ್ಷ ಕಾರಣಗಳಿವೆ!
ಬೆಂಗಳೂರಿನ ಹೊರವಲಯ IT ಕ್ರಾಂತಿಯಿಂದಾಗಿ ಅತಿ ಹೆಚ್ಚು ಜನ ಸಾಂದ್ರತೆ, ಸಂಚಾರ ದಟ್ಟಣೆ ಮತ್ತು ಅನಿರೀಕ್ಷಿತ ಬೆಳವಣಿಗೆ ಇಂದ ಬಳಲಿ ಬೆಂಡಾಗಿದೆ ನಿಜ. ಆದರೆ ಹಳೆ ಬೆಂಗಳೂರು ನಿಜಕ್ಕೂ ಸುಂದರ.
ಬೆಂಗಳೂರಿನ ಎರಡು ಕಣ್ಣುಗಳು ಎಂದೇ ಕರೆಯಬಹುದಾದ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಗರದ ಹೃದಯ ಭಾಗದಲ್ಲಿರುವ ಎರಡು ಬೃಹತ್ ಉದ್ಯಾನವನಗಳಾಗಿವೆ. ಇವು ನಮ್ಮ ಉಸಿರು ಇದ್ದಂತೆ.
ಇಲ್ಲಿ ಮ್ಯಾರಥಾನ್, ಸಂಚಾರಿ ನಾಟಕಗಳು, ಡಾಗ್ ಶೋ ಮುಂತಾದ ಚಟುವಟಿಕೆಗಳು ಪ್ರತಿ ವಾರ ನಡೆಯುತ್ತವೆ. ವಾರಾಂತ್ಯದಲ್ಲಿ ವಾಯುವಿಹಾರಕ್ಕೆಂದೇ ಮಕ್ಕಳು, ಯುವಕರು ಮತ್ತು ವೃದ್ಧರಾದಿಯಾಗಿ ಎಲ್ಲಾ ವಯೋಮಾನದವರು ಇಲ್ಲಿಗೆ ಆಗಮಿಸುತ್ತಾರೆ.
ಬೆಂಗಳೂರಿನ ವಿಧಾನ ಸೌಧದ ಸುತ್ತ ಮುತ್ತ ಇರುವ ರಾಜಭವನ ರಸ್ತೆ, ಮಿಲ್ಲರ್ಸ್ ರೋಡ್, ಕ್ವೀನ್ಸ್ ರಸ್ತೆ, ಹಾಗೆ ಮಹಾತ್ಮಾ ಗಾಂಧಿ ರಸ್ತೆ ಬಳಿ ಇರುವ ಚರ್ಚ್ ಸ್ಟ್ರೀಟ್, St. ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆಗಳಲ್ಲಿ ವಾರಾಂತ್ಯದ ಬೆಳಗಿನ ಜಾವ ಅಡ್ಡಾಡುವುದೆಂದರೆ ನಿಜಕ್ಕೂ ಮನಸ್ಸಿಗೆ ಉಲ್ಲಾಸ ನೀಡುತ್ತೆ. ಈ ಜಾಗಗಳಲ್ಲಿ ಬೆಳಗ್ಗಿನ ಜಾವ ಮದುವೆಯ ಪ್ರಿ-ವೆಡ್ಡಿಂಗ್ ಶೂಟ್, ಮಾಡೆಲ್ ಗಳ ಫೋಟೋ ಶೂಟ್, ಯುವಕರ ರೀಲ್ಸ್ (Reels) ಚಿತ್ರೀಕರಣ ಸಹ ನಡೆಯುತ್ತಿರುತ್ತವೆ.
ಇಲ್ಲಿ ಸಾಕಷ್ಟು ಉತ್ತಮ ರೆಸ್ಟೋರೆಂಟ್‌ಗಳಿದ್ದು, ಹೋಟೆಲ್ ಏರ್‌ಲೈನ್ಸ್, Koshys ಮುಂತಾದ ಹಳೆಯ ರೆಸ್ಟೋರೆಂಟ್‌ಗಳು ಇಂದಿಗೂ ಸಹ ಚಾಲ್ತಿಯಲ್ಲಿವೆ. ಇನ್ನು Amintiri, IDC ಕಿಚನ್ ಅಂತಹ ಹೊಸ ತಲೆಮಾರಿನ ರೆಸ್ಟೋರೆಂಟ್‌ಗಳು ಬೆಳಗ್ಗಿನ ಉಪಹಾರಕ್ಕೆ ಹೇಳಿಮಾಡಿಸಿದ ಜಾಗಗಳಾಗಿವೆ.
ಜಯನಗರ, ಬಸವನಗುಡಿ ಮತ್ತು ಮಲ್ಲೇಶ್ವರಂ ಒಂದು ಕಾಲದಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ವಸತಿ ಪ್ರದೇಶಗಳಾಗಿದ್ದವು. ಇಂದಿಗೂ ಸಹ ವಸತಿ ಪ್ರದೇಶವಾಗಿದ್ದರೂ, ಕಾಲಕ್ಕೆ ತಕ್ಕಂತೆ ಅನೇಕ ಹಳೆಯ ಮನೆಗಳು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಾಗಿ ಪರಿವರ್ತನೆ ಆಗಿವೆ.
MG ರೋಡ್, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ರೀತಿಯಲ್ಲಿ ಈ ವಸತಿ ಬಡಾವಣೆಗಳು ಸಹ ವಾಯುವಿಹಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಈ ಪ್ರದೇಶಗಳಲ್ಲಿ:
ವಿಶ್ವ ಪ್ರಸಿದ್ಧ MTR
ವಿದ್ಯಾರ್ಥಿ ಭವನ
CTR
ಮಯ್ಯಾಸ್
ವೀಣಾ ಸ್ಟೋರ್ಸ್
ರಾಘವೇಂದ್ರ ಸ್ಟೋರ್ಸ್
ಅಂತಹ ಪ್ರಸಿದ್ಧ ರೆಸ್ಟೋರೆಂಟ್‌ಗಳ ಜೊತೆಗೆ ಅನೇಕ ಹೊಸ ತಲೆಮಾರಿನ ವಿವಿಧ ರೆಸ್ಟೋರೆಂಟ್‌ಗಳು ವಾಯುವಿಹಾರಕ್ಕೆ ಬರುವ ಜನರ ನೆಚ್ಚಿನ ಉಪಹಾರ ಕೇಂದ್ರಗಳಾಗಿವೆ.
ಬೆಂಗಳೂರಿನ ತಂಪಾದ ವಾತಾವರಣ, ಫಿಲ್ಟರ್ ಕಾಫಿ, ತರೇವಾರಿ ದೋಸೆಗಳು ನಮ್ಮ ವಾರಾಂತ್ಯದ ಮುಂಜಾನೆಯನ್ನು ಬೆಚ್ಚಗೆ ಇಡುತ್ತವೆ. ಬೇರೆ ನಗರಗಳಲ್ಲಿ ಬೆಂಗಳೂರಿಗಿಂತ ಉತ್ತಮ ರಸ್ತೆ ಇರಬಹುದು ಅಥವಾ ಸಂಚಾರ ದಟ್ಟಣೆ ಕಡಿಮೆ ಇರಬಹುದು ಆದರೆ ಬೆಂಗಳೂರಿನ Vibe ಕಂಡಿತಾ ಸಿಗುವುದಿಲ್ಲ.ಬೆಂಗಳೂರು ಪ್ರೇಯಸಿ ಇದ್ದ ಹಾಗೆ, ನಮ್ಮನ್ನು ಸದಾ ಕಾಡುತ್ತಾಳೆ.
ಬೆಂಗಳೂರನ್ನು ಇಷ್ಟಪಡಲು ಲಕ್ಷ ಕಾರಣಗಳಲ್ಲಿ ಇವು ಕೇವಲ ಕೆಲವು ಕಾರಣಗಳು.
Comments
Post a Comment