ನಮ್ಮ ರಸ್ತೆ ಹೆಸರುಗಳ ಕತೆ ಮತ್ತು ವ್ಯಥೆ


ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೊಂದಿಕೊಂಡಂತೆ ನೀಲಾದ್ರಿ ಎಂಬ ಪ್ರಸಿದ್ಧ ರಸ್ತೆ ಇದೆ, ಈಗ ಈ ರಸ್ತೆಗೆ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಡಿ.ಕೆ. ಸುರೇಶ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ.

'ನೀಲಾದ್ರಿ' ಎಂತಹ ಸುಂದರ ಹೆಸರು! ನಗರೀಕರಣವಾಗುವ ಮುನ್ನ ಅಲ್ಲಿದ್ದ 'ನೀಲಾದ್ರಿ Amusement Water Park' ಕಾರಣಕ್ಕೆ ಜನಬಳಕೆಯಲ್ಲಿ ಆ ಹೆಸರು ಬಂದಿತ್ತು. ಜನರ ಬಾಯಲ್ಲಿ ಹುಟ್ಟಿ, ಆ ಸ್ಥಳದ ಇತಿಹಾಸವನ್ನು ಸಾರುತ್ತಿದ್ದ ಒಂದು ಸೊಗಸಾದ ಹೆಸರನ್ನು ಬದಲಿಸಿದ್ದು, ಅಲ್ಲಿನ ಹಿಂದಿನ ನೆನಪುಗಳನ್ನು ಅಳಿಸಿಹಾಕಿದಂತಿದೆ.

ಮೈಸೂರಿನ ಕುವೆಂಪು ನಗರ: ಹೆಸರುಗಳ ಮಾಧುರ್ಯ

ಇಂತಹ ಸಂದರ್ಭಗಳಲ್ಲಿ, ನಾನು ಬೆಳೆದ ಮೈಸೂರಿನ ಕುವೆಂಪು ನಗರದ ರಸ್ತೆಗಳ ಹೆಸರುಗಳು ನನಗೆ ನೆನಪಾಗುತ್ತವೆ. ಅಲ್ಲಿನ ರಸ್ತೆಗಳ ಹೆಸರುಗಳನ್ನು ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳು, ಕಥೆಗಳು ಅಥವಾ ಕವಿತೆಗಳಲ್ಲಿ ಬಂದ ಜನಪ್ರಿಯ ಹೆಸರುಗಳಿಂದ ಆರಿಸಲಾಗಿದೆ.

  • ಅನಿಕೇತನ ರಸ್ತೆ

  • ನವಿಲು ರಸ್ತೆ

  • ಪಾರಿಜಾತ ರಸ್ತೆ

  • ಉದಯರವಿ ರಸ್ತೆ

  • ವಿಶ್ವ ಮಾನವ ಜೋಡಿ ರಸ್ತೆ

  • ಪಂಚಮಂತ್ರ ರಸ್ತೆ

ಈ ಹೆಸರುಗಳು ಕೇವಲ ಫಲಕಗಳಲ್ಲ; ಅವು ಮೈಸೂರಿನಷ್ಟೇ ಮಧುರ ಮತ್ತು ಆಪ್ತವಾಗಿವೆ. ಈ ರಸ್ತೆಗಳಲ್ಲಿ ಓಡಾಡುವಾಗ ಆಗುವ ಆನಂದವೇ ಒಂದು ಅನನ್ಯ ಅನುಭವ. ಒಂದು ಸಾಹಿತ್ಯಕ ಸ್ಪರ್ಶ, ಸಾಂಸ್ಕೃತಿಕ ನೆನಪು ಆ ರಸ್ತೆಗಳಿಗಿದೆ.

ಇಂದಿನ ಪರಸ್ಥಿತಿ — ಹೆಸರಿನಲ್ಲಿ ರಾಜಕೀಯ

ಆದರೆ, ಇಂದು ರಸ್ತೆ,ಬಡಾವಣೆ ಮತ್ತು ವೃತ್ತಗಳ (ಸರ್ಕಲ್‌ಗಳ) ಹೆಸರಿಡುವ ಪರಿಪಾಠ ರಾಜಕೀಯಗೊಳಿಸಲ್ಪಟ್ಟಿದೆ. ಎಲ್ಲಿ ನೋಡಿದರೂ ನಾನಾ ಜಾತಿಯ ಪ್ರಮುಖರ ಹೆಸರಿನಲ್ಲಿ ಜಾತಿ ರಾಜಕೀಯಕ್ಕೆ ಅನುಕೂಲವಾಗುವಂತೆ ಹೆಸರಿಡುವ ಸಂಪ್ರದಾಯ ಹೆಚ್ಚಾಗಿದೆ. ಜೊತೆಗೆ, ತಮ್ಮ ನೆಚ್ಚಿನ ರಾಜಕೀಯ ನಾಯಕರ ಹೆಸರನ್ನು ಇಡುವ ಚಾಳಿಯೂ ಬೆಳೆದಿದೆ.

ಇದರ ಹಿಂದೆ ಒಂದು ಸ್ಪಷ್ಟವಾದ ಸಾಂಸ್ಕೃತಿಕ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಒಂದು ನಾಡಿನ ಕೊಡುಗೆ ಕೆಲವೇ ಸಮುದಾಯ ಅಥವಾ ರಾಜಕೀಯ ನಾಯಕರಿಗೆ ಸೀಮಿತವಾಗಿಲ್ಲ. ನಾಡಿನ ಕಟ್ಟುವಿಕೆಯಲ್ಲಿ ಎಲ್ಲ ಕ್ಷೇತ್ರಗಳ, ಎಲ್ಲ ಪಂಗಡದ ಜನರ ಕೊಡುಗೆಯೂ ಇದೆ. ನಾವು ಎಲ್ಲರನ್ನೂ ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ.

ಈಗಿನ ಆಡಳಿತಗಾರರಿಗೆ ಮತ್ತು ಅಧಿಕಾರಿ ವರ್ಗದವರಿಗೆ ಸಾಂಸ್ಕೃತಿಕ ಪರಿಚಯ ಅಥವಾ ದೂರದೃಷ್ಟಿಯ ಕೊರತೆಯಿಂದಾಗಿ, ಅಲ್ಲಿ ಅರ್ಥಪೂರ್ಣವಾದ ಮತ್ತು ಸಾಂಸ್ಕೃತಿಕ ಮೌಲ್ಯವಿರುವ ಹೆಸರುಗಳ ಬದಲಿಗೆ, ಕೇವಲ ರಾಜಕೀಯ ಪ್ರಭಾವ ಇರುವ ಹೆಸರುಗಳು ತಲೆ ಎತ್ತುತ್ತಿವೆ. ಇದೇ ಕಾರಣಕ್ಕೆ, ಸಾಂಸ್ಕೃತಿಕ ಹಿನ್ನೆಲೆಯಿಲ್ಲದೆ, ಕೇವಲ ರಾಜಕೀಯ ನಾಯಕರು, ಧಾರ್ಮಿಕ ನಾಯಕರು ಅಥವಾ ಸಿನಿಮಾ ನಟರ ಹೆಸರಲ್ಲಿ ರಸ್ತೆ, ಬಡಾವಣೆ ಮತ್ತು ಸರ್ಕಲ್‌ಗಳು ರೂಪಗೊಳ್ಳುತ್ತಿವೆ.

ಒಂದು ರಸ್ತೆಯ ಹೆಸರು ಆ ಸ್ಥಳದ ಚರಿತ್ರೆ, ಸಂಸ್ಕೃತಿ ಮತ್ತು ಜನಸಾಮಾನ್ಯರ ಬದುಕಿನ ಕಥೆ ಹೇಳಬೇಕು. ಅವು ಕೇವಲ ರಾಜಕೀಯ, ಜಾತಿ-ಪ್ರಭಾವದ ಫಲಕಗಳಾಗಬಾರದು ಅಥವಾ ಜನಪ್ರಿಯತೆಯ ಮಾನದಂಡವಾಗಬಾರದು.

ಆದರೆ, ಈ ರಾಜಕೀಯ ನಾಮಕರಣಗಳ ನಡುವೆಯೂ ಒಂದು ಆಶಾಭಾವನೆ ಇದೆ. ಕೆಲವೊಂದು ರಸ್ತೆಗಳು, ಬಸ್ ನಿಲ್ದಾಣಗಳು ಅಥವಾ ವೃತ್ತಗಳು ಅಧಿಕೃತವಾಗಿ ಮರುನಾಮಕರಣಗೊಂಡರೂ ಸಹ, ಜನಸಾಮಾನ್ಯರ ಬಾಯಲ್ಲಿ ಮತ್ತು ನೆನಪಿನಲ್ಲಿ ಆ ಜನಪ್ರಿಯ ಹಳೆಯ ಹೆಸರುಗಳೇ ಶಾಶ್ವತವಾಗಿ ಉಳಿದುಬಿಡುತ್ತವೆ.ಉದಾಹರಣೆಗೆ ಮೈಸೂರಿನ ಬಲ್ಲಾಳ್ ಸರ್ಕಲ್, ಅಕ್ಷಯ ಭಂಡಾರ್ ಬಸ್ ನಿಲ್ದಾಣ, ಬೆಂಗಳೂರಿನ ಜಯನಗರದ ಶಾಲಿನಿ ಮೈದಾನ - ಇಂದಿಗೂ ಸಹ ಅದೆ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಹಾಗೆ ನೀಲಾದ್ರಿ ರಸ್ತೆ ಸಹ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬಾಯಲ್ಲಿ ಇದೆ ಹೆಸರು ಉಳಿಯುವಂತಾಗಲಿ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧