ಬೆಂಗಳೂರು ಸುತ್ತಮುತ್ತ ಚಾರಣ — ಪ್ರಕೃತಿ, ಪರಂಪರೆ ಮತ್ತು ಕೋಟೆಗಳ ಸಂಚಾರ
- Get link
- X
- Other Apps
ಬೆಂಗಳೂರು ಸುತ್ತಮುತ್ತ ಚಾರಣ ಮಾಡಲು ಅನೇಕ ಅದ್ಭುತ ಸ್ಥಳಗಳಿವೆ. ಬಂಡೆಗಳಿಂದ ಕೂಡಿದ ಬೆಟ್ಟಗಳು, ಏಕಶಿಲಾ ರಚನೆಗಳು ಮತ್ತು ಇತಿಹಾಸದ ಸುಳಿವುಗಳನ್ನು ಹೊತ್ತಿರುವ ಕೋಟೆಗಳು — ಇವೆಲ್ಲವೂ ಚಾರಣಪ್ರಿಯರ ಮನಸೆಳೆಯುವ ವೈಶಿಷ್ಟ್ಯಗಳು. ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ಈ ಪ್ರದೇಶಗಳಲ್ಲಿ ಸಾಮಂತರು ತಮ್ಮ ಆಡಳಿತ ಮತ್ತು ರಕ್ಷಣೆಗೆ ಅನೇಕ ಬೆಟ್ಟಗಳ ಮೇಲೆ ಕೋಟೆಗಳನ್ನು ಕಟ್ಟಿದ್ದರು. ಇಂದು ಅದರ ಅವಶೇಷಗಳನ್ನು ನೆನಪಿನ ಗುರುತುಗಳಂತೆ ನೋಡಬಹುದು.
ನಂದಿ ಬೆಟ್ಟದಲ್ಲಿರುವ ಟಿಪ್ಪು ಸುಲ್ತಾನ್ ಅರಮನೆ ಹಾಗೂ “ಟಿಪ್ಪು ಡ್ರಾಪ್’’ ಎನ್ನುವ ಸ್ಥಳ ಅದಕ್ಕೆ ಜೀವಂತ ಸಾಕ್ಷಿ. ಅದೇ ರೀತಿ ನಂದಿ ಬೆಟ್ಟದಂತೆ ಆಹ್ಲಾದಕರ ವಾತಾವರಣ ಹೊಂದಿರುವ ಸ್ಕಂದಗಿರಿ ಚಾರಣಿಗರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಗುಡಿಬಂಡೆ, ಸಾವನದುರ್ಗ, ಹುತ್ತರಿ ಬೆಟ್ಟ, ದೇವರಾಯನದುರ್ಗಾ—ಇವೆಲ್ಲಾ ನಮ್ಮ ಅತೀತ ರಾಜವಂಶಗಳ ಕೋಟೆ ಕಟ್ಟುವ ಪರಂಪರೆಯನ್ನು ಹೆಮ್ಮೆಯಿಂದ ಸಾರುತ್ತವೆ. ಕೆಲವು ಗಟ್ಟಿಮುಟ್ಟಾಗಿ ಉಳಿದಿದ್ದರೆ, ಕೆಲವೆಡೆ ಕಾಲದ ಹೊಡೆತಕ್ಕೆ ಶಿಥಿಲಾವಸ್ಥೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಕೆಲವು ಬೆಟ್ಟಗಳನ್ನು “Eco Tourism’’ ಅಡಿಯಲ್ಲಿ ಗುರುತಿಸಿ ಉತ್ತಮ ನಿರ್ವಹಣೆಯತ್ತ ಹೆಜ್ಜೆ ಹಾಕುತ್ತಿದೆ. ಇದರಿಂದ ಅನೈತಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಚಾರಣಿಗರು ತಪ್ಪಿಹೋಗುವ ಘಟನೆಗಳು ಸಹ ಇಳಿಮುಖವಾಗಿವೆ. ಆದರೆ ಇನ್ನೂ ಉತ್ತಮ ಮಾರ್ಗಸೂಚನೆ, ತರಬೇತಿ ಹೊಂದಿದ ಮಾರ್ಗದರ್ಶಿಗಳು ಮತ್ತು ಪ್ರಚಾರದ ಅಗತ್ಯವಿದೆ. ಸರಕಾರ ವೃತ್ತಿಪರತೆಯಿಂದ ಈ ಕ್ಷೇತ್ರವನ್ನು ಬಲಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತಮ ಹೆಸರಿನ ಜೊತೆಗೆ ಅರಣ್ಯ ಸಂಪತ್ತು ಮತ್ತು ಇತಿಹಾಸಿಕ ಪರಂಪರೆ ಉಳಿಯುತ್ತದೆ.
ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಕೋಲಾರ ಪ್ರದೇಶಗಳಲ್ಲಿ ಚಾರಣಕ್ಕೆ ಸೂಕ್ತವಾದ ಅನೇಕ ಅಪರೂಪದ ಗುಡ್ಡಗಳು,ಬೆಟ್ಟಗಳು ಮತ್ತು ಏಕಶಿಲಾ ರಚನೆಗಳು ಸಿಗುತ್ತವೆ. ಇತ್ತೀಚೆಗೆ ನಾನು ರಾಮನಗರದ ಸಮೀಪ ಇರುವ, ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟವಾದ ಸಾವನದುರ್ಗದ ಮಡಿಲಲ್ಲಿರುವ ‘ಬಿದಿರುಕಟ್ಟೆ’ ಗೆ ಭೇಟಿ ನೀಡಿದ್ದೆ. ಅರಣ್ಯ ಇಲಾಖೆಯ ಅರಣ್ಯ ವಿಹಾರ ಅಂತರಜಾಲ ತಾಣದಲ್ಲಿ ಬುಕ್ಕಿಂಗ್ ಮಾಡಿಕೊಂಡು ಹೋಗಬೇಕಾಗುತ್ತದೆ. ಬಿದಿರುಕಟ್ಟೆಯ ಸುಂದರ ವಿನ್ಯಾಸ, ನೈಸರ್ಗಿಕ ರಚನೆ ಮತ್ತು ನಿಶ್ಶಬ್ದತೆಯ ನಡುವೆ ನಿಂತಾಗ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ. ಬಿದಿರುಕಟ್ಟೆ, ಸಾವನದುರ್ಗದ ಮಡಿಲಲ್ಲಿರುವ ಒಂದು ವಿಸ್ಮಯ ಮತ್ತು ಅದ್ಭುತವಾದ ತಾಣ.
ಬೆಂಗಳೂರಿನ ಹತ್ತಿರದಲ್ಲೇ ಇಂತಹ hidden gem ಸ್ಥಳವಿದ್ದು ಪ್ರಚಾರದ ಕೊರತೆಯಿಂದ ಅನೇಕರಿಗೆ ಈ ಜಾಗದ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಇಲ್ಲಿ ಪ್ರಸಿದ್ಧ ಹಾಲಿವುಡ್ ಚಿತ್ರ A Passage to India ಚಿತ್ರೀಕರಣವೂ ನಡೆದಿದೆ—ಇದೇ ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ದೊರೆತಿವೆ ಎನ್ನುವುದೂ ವಿಶೇಷ. ೧೯೮೪ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಖ್ಯಾತ ನಿರ್ದೇಶಕ ಡೇವಿಡ್ ಲೀನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು, ಇಂಗ್ಲಿಷ್ ಸಾಹಿತ್ಯದ ದಿಗ್ಗಜ E. M. Forster ಬರೆದ ಕಾದಂಬರಿಯ ಆಧಾರಿತವಾಗಿದೆ. ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಈ ಬಿದಿರುಕಟ್ಟೆ ಅಲ್ಲಿ ಚಿತ್ರೀಕರಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಮಕ್ಕಳನ್ನು ಇಲ್ಲಿ ಕರೆದುಕೊಂಡು ಹೋದರೆ ಭೂಗೋಳ, ಇತಿಹಾಸ ಹಾಗೂ ಪರಿಸರ ಸಂರಕ್ಷಣೆ ಕುರಿತು ಕಲಿಯಲು ಅನೇಕ ವಿಷಯಗಳು ದೊರೆಯುತ್ತವೆ.
ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಹಾಲಿವುಡ್, ಬಾಲಿವುಡ್ ಮತ್ತು ದಕ್ಷಿಣ ಭಾರತದ ಹಲವು ಚಿತ್ರಗಳ ಚಿತ್ರೀಕರಣ ನಡೆದಿದೆ. ಶೋಲೆ, ಕೂಲಿ, A Passage to India ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳು ಇಲ್ಲಿ ಮೂಡಿ ಬಂದಿದ್ದರೂ ಅದರ ಬಗ್ಗೆ ಸ್ಥಳೀಯರಿಗೆ ಸಾಕಷ್ಟು ಮಾಹಿತಿ ಇಲ್ಲ. ಬೆಂಗಳೂರು ಆರ್ಥಿಕವಾಗಿ ಬಲವಾಗಿರುವ ಕಾರಣ, ಈ ಪ್ರದೇಶಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಿದರೆ ಸರ್ಕಾರಕ್ಕೆ ಆದಾಯವೂ ಹೆಚ್ಚುತ್ತದೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ.
ಅಂದಹಾಗೆ, ಬೆಂಗಳೂರಿನ ಸುತ್ತಮುತ್ತ ಒಟ್ಟು ೯ ದುರ್ಗಗಳು ಇದ್ದು, ಅವುಗಳೆಲ್ಲವೂ ತಮ್ಮದೇ ಆದ ಇತಿಹಾಸ ಹೊಂದಿವೆ. ಇದುವರೆಗೂ ನಾನು ನಂದಿ ದುರ್ಗಾ, ಹುತ್ತರಿ ದುರ್ಗಾ, ಮಾಕಳಿ ದುರ್ಗಾ, ದೇವರಾಯನದುರ್ಗಾ, ಮತ್ತು ಸಾವನದುರ್ಗಗಳಿಗೆ ಚಾರಣ ಮಾಡಿದ್ದೇನೆ. ಇನ್ನೂ ಅನೇಕ ದುರ್ಗಗಳು ಮತ್ತು ಬೆಟ್ಟಗಳು ಉಳಿದಿದ್ದು, ಅವುಗಳಿಗೆ ಚಾರಣ ಮಾಡುವ ಆಸೆ ಇದೆ.
- Get link
- X
- Other Apps

Comments
Post a Comment