ಅವರೇಕಾಳು ಮೇಳ ಮತ್ತು ವಿ.ವಿ. ಪುರಂ ತಿಂಡಿ ಬೀದಿ: ಒಂದು ಸೊಗಡು


ಅವರೇಕಾಳು ಉಪ್ಪಿಟ್ಟು, ಅವರೇಕಾಳು ಪಲಾವ್, ಅವರೇಕಾಳು ದೋಸೆ, ಅವರೇಕಾಳು ಸಾಂಬಾರು, ಅವರೇಕಾಳು ಪಲ್ಯ, ಅವರೇಕಾಳು ರೊಟ್ಟಿ... ಚಳಿಗಾಲ ಆರಂಭವಾಗುತ್ತಿದ್ದಂತೆ, ಅದರಲ್ಲೂ ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ, ನಮ್ಮ ಮನೆಯಲ್ಲಿ ಸರ್ವಂ ಅವರೇಕಾಳು ಮಯಂ! ದಕ್ಷಿಣ ಭಾರತದ, ಅದರಲ್ಲೂ ನಮ್ಮ ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ಅವರೆಕಾಳಿಗಿರುವ ಸ್ಥಾನ ಬಹಳ ವಿಶಿಷ್ಟ.

ಬೆಂದಕಾಳೂರು ಮತ್ತು ಅವರೇಕಾಳಿನ ದಂತಕಥೆ

ನಮ್ಮ ಬೆಂಗಳೂರು ಮತ್ತು ಅವರೆಕಾಳಿಗಿರುವ ಸಂಬಂಧ ಇಂದಿನದಲ್ಲ, ಅದು ಶತಮಾನಗಳಷ್ಟು ಹಳೆಯದು. ಜಾನಪದ ಅಥವಾ ಒಂದು ದಂತಕತೆಯ ಪ್ರಕಾರ, ಹೊಯ್ಸಳ ರಾಜ, ವೀರ ಬಲ್ಲಾಳ II ಅವರು ಇಂದಿನ ಬೆಂಗಳೂರು ಸುತ್ತ ಮುತ್ತ ಪ್ರದೇಶಕ್ಕೆ ಬೇಟೆಗಾಗಿ ಬಂದಾಗ, ಹಸಿವು ತೀರಿಸಿಕೊಂಡದ್ದು ಬೆಂದಕಾಳು ಅಂದರೆ ಅವರೇಕಾಳಿನಿಂದ. ಇದರ ರುಚಿಯಿಂದ ಪ್ರಭಾವಿತರಾದ ರಾಜ, ಈ ಪ್ರದೇಶವನ್ನು 'ಬೆಂದಕಾಳೂರು' ಎಂದು ಕರೆದನಂತೆ. ಮುಂದೆ ಇದೇ ಹೆಸರು ಪ್ರಸಿದ್ಧಿ ಪಡೆದು ಬೆಂಗಳೂರು ಆಗಿ ಬದಲಾಯಿತು. ಇಂದಿಗೂ ಸಹ ಬೆಂಗಳೂರಿನ ಸಮೀಪದ ಮಾಗಡಿ ಪ್ರದೇಶದಲ್ಲಿ ಬೆಳೆಯುವ ಅವರೇಕಾಳಿಗೆ ಇರುವ ಸೊಗಡು, ದಕ್ಷಿಣ ಭಾರತದ ಬೇರೆ ಎಲ್ಲೂ ಸಿಗುವುದಿಲ್ಲ. ಆ ಮಣ್ಣಿನ ವಾಸನೆ, ಆ ತಾಜಾತನ—ಅದು ಬೇರೆ ತರಹದ ಅನುಭವ.

ಅವರೇಕಾಳು ಮೇಳ: ಒಂದು ಸೊಗಡಿನ ಕಥೆ

ಈ ಅವರೆಕಾಳಿನ ಸವಿಯನ್ನು ಸಂಭ್ರಮಿಸಲು ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ಘಟನೆ ಎಂದರೆ, ವಿ.ವಿ. ಪುರಂ/ಬಸವನಗುಡಿಯ 'ಅವರೇಕಾಳು ಮೇಳ'. ಕಳೆದ 25 ವರ್ಷಗಳಿಂದ ಡಿಸೆಂಬರ್ ಕೊನೆಯ ವಾರ ಮತ್ತು ಜನವರಿ ಮೊದಲ ವಾರದಲ್ಲಿ ಈ ಮೇಳ ನಡೆಯುತ್ತಾ ಬಂದಿದೆ.

ಮೊದಲೆಲ್ಲ ವಿ.ವಿ. ಪುರಂನ ಜಗತ್ಪ್ರಸಿದ್ಧ ತಿಂಡಿ ಬೀದಿಯಲ್ಲೇ, ವಾಸವಿ ಕಾಂಡಿಮೆಂಟ್ಸ್‌ನವರು ಈ ಮೇಳವನ್ನು ನಡೆಸುತ್ತಿದ್ದರು. ಆ ಕೆಲವು ವರ್ಷಗಳ ಹಿಂದಿನ ಮೇಳದ ವೈಭವವನ್ನು ಎಷ್ಟು ಬಣ್ಣಿಸಿದರೂ ಸಾಲದು!

  • ಮಾಗಡಿ ಸೊಗಡು: ಮೇಳದ ವೈಶಿಷ್ಟ್ಯವೆಂದರೆ, ಮಾಗಡಿ ರೈತರಿಂದ ನೇರವಾಗಿ ಅವರೆಕಾಳು ಖರೀದಿಸಿ, ತಿಂಡಿ ತಿನಿಸುಗಳನ್ನು ತಯಾರಿಸಲು ಬಳಸುತ್ತಿದ್ದರು. ರೈತರಿಗೆ ಅವರ ಬೆಳೆಗೆ ಉತ್ತಮ ಬೆಲೆ ಸಿಗಲಿ ಮತ್ತು ಗ್ರಾಹಕರಿಗೆ ಮಾಗಡಿ ಮಣ್ಣಿನ ಸೊಗಡಿನ ಅವರೆಕಾಳು ಸಿಗಲಿ ಎಂಬ ಆಶಯದಿಂದಲೇ ಈ ಮೇಳ ಆರಂಭವಾಯಿತು.

  • ರುಚಿಯ ಸಿಂಚನ: ಆ ತಿಂಡಿ ಬೀದಿಯಲ್ಲಿ ಸಿಗುತ್ತಿದ್ದ ಮಸಾಲೆ ವಡೆ, ದೋಸೆ, ಅಕ್ಕಿ ರೊಟ್ಟಿ, ಕೋಡುಬಳೆ, ಜಿಲೇಬಿ ಎಲ್ಲವೂ ಮಾಗಡಿ ಸೊಗಡಿನ ಅವರೆಕಾಳಿನಿಂದ ಇನ್ನಷ್ಟು ರುಚಿಯಾಗಿರುತ್ತಿತ್ತು. ಬೀದಿ ತುಂಬಾ ಅವರೆಕಾಳಿನ ಸೊಗಡು ಪಸರಿಸುತ್ತಿತ್ತು.

  • ಕಾಯುವಿಕೆ: ಅವರೆಕಾಳು ಕೇವಲ seasonal ಬೆಳೆಯಾಗಿದ್ದರಿಂದ, ಫೆಬ್ರವರಿ ನಂತರ ಸಿಗುತ್ತಿರಲಿಲ್ಲ. ಹಾಗಾಗಿ ಈ ಮೇಳಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೆವು.

ಸೊಗಡು ಮಾಯವಾದ ಕಥೆ...

ಆದರೆ ಕಾಲ ಬದಲಾದಂತೆ, ಕೆಲವು ಬದಲಾವಣೆಗಳು ನಮ್ಮ ಮೂಲ ಸೊಗಡನ್ನು ಕಸಿದುಕೊಂಡಿವೆ.

  1. ವರ್ಷವಿಡೀ ಅವರೆಕಾಳು: ಕೋಲ್ಡ್ ಸ್ಟೋರೇಜ್ ತಂತ್ರಜ್ಞಾನ ಬಂದಿರುವ ಕಾರಣ, ಇಂದು ವರ್ಷ ಪೂರ್ತಿ ಅವರೆಕಾಳು ಲಭ್ಯವಿದೆ. ಇದರಿಂದ ಅದರ 'seasonal' ಆಕರ್ಷಣೆ ಮತ್ತು ಆ ಮಾಗಡಿ ಅವರೆಕಾಳಿನ ವಿಶಿಷ್ಟ ಸೊಗಡು ಮಸುಕಾಗುತ್ತಿದೆ.

  2. ಸ್ಥಳಾಂತರ ಮತ್ತು ವ್ಯಾಪಾರೀಕರಣ: ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ವಿಡಿಯೋಗಳ ಮೂಲಕ ಈ ಮೇಳವು ಹೆಚ್ಚು ಜನಪ್ರಿಯಗೊಂಡ ಕಾರಣ, ಜನಸಂದಣಿಯನ್ನು ನಿರ್ವಹಿಸಲು ಇತ್ತೀಚಿನ ವರ್ಷಗಳಲ್ಲಿ ಮೇಳವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಗ್ರೌಂಡ್ಸ್‌ಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದಾಗಿ ಆ ವಿ.ವಿ. ಪುರಂ ತಿಂಡಿ ಬೀದಿಯ ಮೂಲ, ಮಾಗಡಿ ಸೊಗಡಿನ ಅವರೇಕಾಳು ಮೇಳವು ಇಂದು ಸಂಪೂರ್ಣ ಕಳೆಗುಂದಿದೆ. ಎಲ್ಲವೂ ವ್ಯಾಪಾರೀಕರಣಗೊಂಡಿದೆ.

ವಿ.ವಿ. ಪುರಂ ತಿಂಡಿ ಬೀದಿಯ ಬದಲಾವಣೆ

ಅವರೇಕಾಳು ಮೇಳದಂತೆಯೇ, ವಿ.ವಿ. ಪುರಂ ತಿಂಡಿ ಬೀದಿಯೂ ಬಹಳ ಬದಲಾಗಿದೆ. ವಾಸವಿ ಕಾಂಡಿಮೆಂಟ್ಸ್ ಜೊತೆಗೆ, ವಿ.ಬಿ. ಬೇಕರಿ, ಶಿವಣ್ಣ ಗುಲ್ಕಂದ್, ಸ್ವಾಮಿ ಬಜ್ಜಿ ಸೆಂಟರ್‌ನಂತಹ ಸ್ಥಳೀಯ ಅಂಗಡಿಗಳು ಈ ಬೀದಿಗೆ ಒಂದು ಕಾಲದಲ್ಲಿ ಮೆರಗು ಕೊಡುತ್ತಿದ್ದವು ಮತ್ತು ಇಂದಿಗೂ ಸಹ ಮೆರಗನ್ನು ಕೊಡುತ್ತಿವೆ

ಆದರೆ ಇಂದು, ಉತ್ತರ ಭಾರತೀಯರು ನಡೆಸುವ ಸಾಕಷ್ಟು ತಿಂಡಿ ತಿನಿಸು ಅಂಗಡಿಗಳು ಹುಟ್ಟಿಕೊಂಡಿವೆ. ಒಂದು ಕಾಲದಲ್ಲಿ ಅಪ್ಪಟ ಕನ್ನಡ ಮಣ್ಣಿನ ಸೊಗಡಾಗಿದ್ದ ಈ ತಿಂಡಿ ಬೀದಿ, ಇಂದು ಉತ್ತರ ಭಾರತೀಯ ಖಾದ್ಯಗಳ ಪ್ರಾಬಲ್ಯದಿಂದಾಗಿ ಯಾಕೋ ನೀರಸವೆನಿಸಿದೆ.

ಇಂದಿಗೂ ಈ ತಿಂಡಿ ಬೀದಿ ಬಲು ಜನಪ್ರಿಯ, ಆದರೆ ಮೊದಲಿನ ಸೊಗಡನ್ನು ಸಂಪೂರ್ಣ ಕಳೆದುಕೊಂಡಿದೆ. ವಿ.ವಿ. ಪುರಂ ತಿಂಡಿ ಬೀದಿಗೆ ಹೋದಾಗ, ಕೆಲವು ವರ್ಷಗಳ ನಂತರ ಈ ಮೂಲ ಅಂಗಡಿಗಳೂ ಕಣ್ಮರೆಯಾಗುತ್ತವೋ ಏನೋ ಎಂಬ ಆತಂಕ ಮತ್ತು ವಿಷಾದ ಮನಸ್ಸನ್ನು ಭಾರವಾಗಿಸುತ್ತದೆ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧