ಕ್ರಿಕೆಟ್ ವೀಕ್ಷಕ ವಿವರಣೆ: ಕಿವಿಗೆ ಅಪ್ಪಳಿಸುವ ರಸದೌತಣ ಮತ್ತು ಮರೆಯಲಾಗದ ಧ್ವನಿಗಳು
ಕ್ರಿಕೆಟ್
ಎಂಬುದು ಕೇವಲ ಆಟವಲ್ಲ, ಅದೊಂದು
ಭಾವನೆ. ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ನಡೆಯುವ
ಕಾಳಗಕ್ಕೆ ಜೀವ ತುಂಬುವುದು ಕಾಮೆಂಟೇಟರ್
ಬಾಕ್ಸ್ನಿಂದ ಕೇಳಿಬರುವ ಆ
ಧ್ವನಿಗಳು. ಹೌದು, ವೀಕ್ಷಕ ವಿವರಣೆ (Commentary) ಇಲ್ಲದ ಕ್ರಿಕೆಟ್, ಉಪ್ಪಿಲ್ಲದ ಅಡುಗೆಯಂತೆ ನೀರಸ.
ಆಸ್ಟ್ರೇಲಿಯಾದ
ಆ 'ಬಾಕ್ಸಿಂಗ್ ಡೇ' ಮತ್ತು ಚಾನೆಲ್ ೯ ವೈಭವ
ಅದು 1999ರ ಡಿಸೆಂಬರ್ 26. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೇಷ್ಠ ಬೌಲರ್ ಗ್ಲೆನ್ Mcgrath ನಡುವೆ ನಡೆಯುತ್ತಿದ್ದ ಕಾಳಗ ಅದು. ಇದನ್ನು ಕೇವಲ ಕ್ರಿಕೆಟ್ ಕಾಳಗ ಎಂದರೆ ಸಾಲದು; and it was just pure poetry! ಕೆಟ್ಟ ಚೆಂಡುಗಳನ್ನು ಎಸೆಯದ ಬೌಲರ್ Mcgrath ಮತ್ತು ತಾಂತ್ರಿಕವಾಗಿ ಪರಿಪೂರ್ಣ ಬ್ಯಾಟ್ಸ್‌ಮನ್ ಸಚಿನ್—ಇಬ್ಬರ ನಡುವಿನ ಪೈಪೋಟಿ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ.
ಆ ಕ್ಷಣಗಳಿಗೆ ಇನ್ನಷ್ಟು ಮೆರಗು ನೀಡುತ್ತಿದ್ದವರು ಕಾಮೆಂಟೇಟರ್ ಬಾಕ್ಸ್‌ನಲ್ಲಿದ್ದ ದಿಗ್ಗಜರು—Richie Benaud, Tony Greig ಮತ್ತು Ian Chappell. ಅವರ ಮಾತುಗಳು ಆಟದಷ್ಟೇ ರೋಮಾಂಚನಕಾರಿಯಾಗಿದ್ದವು. ಆಸ್ಟ್ರೇಲಿಯಾದ ನೆಲದಲ್ಲಿ ನಡೆಯುವ ಕ್ರಿಕೆಟ್ ನೋಡುವುದು ಎಷ್ಟು ಸೊಗಸೋ, ಅಷ್ಟೇ ಸೊಗಸು ಅಂದಿನ ದಿನಗಳಲ್ಲಿ ಚಾನೆಲ್ 9ನ ವೀಕ್ಷಕ ವಿವರಣೆಗಳನ್ನು ಕೇಳುವುದು. ಕೆಲವೊಮ್ಮೆ ಈ ಮಾತುಗಳನ್ನು ಕೇಳಲೆಂದೇ ಭಾರತದ ಬೆಳಗಿನ ಜಾವ ಎದ್ದು ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದ ದಿನಗಳಿದ್ದವು.
ರೇಡಿಯೋ
ಯುಗದಿಂದ ಟಿವಿ ಪರದೆಯವರೆಗೆ
ನಾವು ಟಿವಿ ಯುಗದವರಾದರೂ, ನಮ್ಮ ಹಿರಿಯರು ರೇಡಿಯೋ ವಿವರಣೆಯ ಬಗ್ಗೆ ಹೇಳುವಾಗ ಮೈ ಪುಳಕವಾಗುತ್ತದೆ. ಜಿ.ಆರ್. ವಿಶ್ವನಾಥ್ ಅವರ ಕಲಾತ್ಮಕ ಬ್ಯಾಟಿಂಗ್ ಅಥವಾ ಎರ್ರಪಳ್ಳಿ ಪ್ರಸನ್ನ ಅವರ ಮಾಂತ್ರಿಕ ಸ್ಪಿನ್ ಅನ್ನು ರೇಡಿಯೋ ಕಾಮೆಂಟೇಟರ್ಗಳು ವರ್ಣಿಸುತ್ತಿದ್ದ ರೀತಿ ಅದ್ಭುತವಾಗಿರುತ್ತಿತ್ತಂತೆ.
1998ರಲ್ಲಿ ಶಾರ್ಜಾದ ಮರುಭೂಮಿಯಲ್ಲಿ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಲೆಗ್ ಸ್ಪಿನ್‌ಗಳಿಗೆ ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾಗ, ಅದಕ್ಕಿಂತಲೂ ಸೊಗಸಾಗಿ ವೀಕ್ಷಕ ವಿವರಣೆ ಕೊಡುತ್ತಿದ್ದ Tony Greig ಅವರ ಪದಗಳು ಇಂದಿಗೂ ಮನಸ್ಸಿನಲ್ಲಿ ಜೀವಂತವಾಗಿವೆ. ಶೇನ್ ವಾರ್ನ್‌ಗೆ ಸಚಿನ್ ಅವರ ಅಬ್ಬರದ ಹೊಡೆತಗಳು ಕನಸಿನಲ್ಲಿಯೂ ಕಾಡುತ್ತಿದ್ದವಂತೆ. ಹಾಗೆಯೆ ನನಗೆ ಸಚಿನ್ ಅವರ ಶಾಟ್‌ಗಳ ಜೊತೆಗೆ Tony Greig ಅವರ ಮಾತುಗಳೂ ಸಹ ಕನಸಿನಲ್ಲಿ ಬರುತ್ತಿದ್ದ ದಿನಗಳಿದ್ದವು.
ದಕ್ಷಿಣ ಆಫ್ರಿಕಾದ
Mike Haysman ಮತ್ತು ಜಿಂಬಾಬ್ವೆಯ Pommie Mbangwa ಅವರ ವೀಕ್ಷಕ ವಿವರಣೆಯೂ ಸಹ ಬಲು ರೋಚಕ. ದಕ್ಷಿಣ
ಆಫ್ರಿಕಾದಲ್ಲಿ ನಡೆಯುತ್ತಿದ್ದ ಟೆಸ್ಟ್ ಸರಣಿಗಳಲ್ಲಿ ಅವರ ಮಾತುಗಳನ್ನು ಕೇಳುವುದೇ ಒಂದು ಸೊಗಸಿನ
ಅನುಭವ.
ಭಾರತೀಯ
ವಿವರಣೆಯ ಯುಗ: ಗವಾಸ್ಕರ್ ಮತ್ತು ರವಿಶಾಸ್ತ್ರಿ
ಭಾರತೀಯ
ಕಾಮೆಂಟೇಟರ್ಗಳ ವಿಚಾರಕ್ಕೆ ಬಂದರೆ,
ಟಿವಿ ಯುಗದ ಮೊದಲ ಜನಪ್ರಿಯ
ವೀಕ್ಷಕ ವಿವರಣಾಕಾರ ಎಂದರೆ ನಿಸ್ಸಂದೇಹವಾಗಿ ಸುನಿಲ್ ಗವಾಸ್ಕರ್. ಅವರ ಬ್ಯಾಟಿಂಗ್ನಂತೆ
ಅವರ ವೀಕ್ಷಕ ವಿವರಣೆಯೂ ಸಹ ಮನಮೋಹಕ. 90ರ ದಶಕದಲ್ಲಿ ಜಾಗತೀಕರಣದ
ಪ್ರಭಾವದಿಂದ ಭಾರತದಲ್ಲಿ ಟಿವಿ ಉದ್ಯಮ ವೇಗವಾಗಿ
ಬೆಳೆಯತೊಡಗಿತು. ಆ ಸಮಯದಲ್ಲಿ ಗವಾಸ್ಕರ್
ಜೊತೆ ಮುಂಚೂಣಿಯಲ್ಲಿ ಇದ್ದವರು ಅವರ ನೆಚ್ಚಿನ ಶಿಷ್ಯ
ರವಿ ಶಾಸ್ತ್ರೀ.
2011ರ
ವಿಶ್ವಕಪ್ ಫೈನಲ್ನಲ್ಲಿ ಧೋನಿ ಸಿಕ್ಸರ್ ಹೊಡೆದು
28 ವರ್ಷಗಳ ನಂತರ ಭಾರತಕ್ಕೆ ಕಪ್
ಗೆದ್ದುಕೊಟ್ಟ ಆ ಕ್ಷಣ—ಅದನ್ನು
ಮರೆಯಲು ಸಾಧ್ಯವೇ ಇಲ್ಲ. ಧೋನಿಯ ಸಿಕ್ಸರ್ ಎಷ್ಟು ರೋಮಾಂಚನ ನೀಡಿತೋ, ಅದಕ್ಕಿಂತ ಕಡಿಮೆಯಿಲ್ಲದ ರೋಮಾಂಚನ ರವಿ ಶಾಸ್ತ್ರೀ ಅವರ
"Dhoni finishes off in style..." ಎಂಬ ಮಾತುಗಳು, ಇಂದಿಗೂ
ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಕಿವಿಯಲ್ಲಿ ರಿಂಗಣಿಸುತ್ತಿವೆ.
ಕ್ರಿಕೆಟ್
ಅನ್ನು ಮೈದಾನದಲ್ಲಿ ನೇರವಾಗಿ ನೋಡುವ ಅನುಭವವೇ ಬೇರೆ. ಆದರೆ ಮನೆಯಲ್ಲೇ ಕುಳಿತು
ವೀಕ್ಷಕ ವಿವರಣೆ ಇಲ್ಲದೆ ಕ್ರಿಕೆಟ್ ನೋಡಲು ಹೋದರೆ ಅದು ನೀರಸವಾಗುತ್ತದೆ. ಕಾಮೆಂಟೇಟರ್
ಆಗಲು ಕ್ರಿಕೆಟ್ ಆಡಿರಬೇಕು ಎಂಬ ನಿಯಮವಿಲ್ಲ ಎಂಬುದಕ್ಕೆ
ಹರ್ಷ ಭೋಗ್ಲೆ ಅತ್ಯುತ್ತಮ ಉದಾಹರಣೆ—ಪ್ರಥಮ ದರ್ಜೆ ಕ್ರಿಕೆಟ್ ಆಡದೇ ಇದ್ದರೂ ಅವರು
ಅಗ್ರಗಣ್ಯ ಕಾಮೆಂಟೇಟರ್ ಆಗಿದ್ದಾರೆ.
ಬದಲಾದ
ಕ್ರಿಕೆಟ್ ಆಯಾಮ: ಗ್ಲಾಮರ್ ಮತ್ತು ಪ್ರಾದೇಶಿಕ ಭಾಷೆ
2003ರ ವಿಶ್ವಕಪ್‌ನಲ್ಲಿ
ಮಂದಿರಾ ಬೇಡಿಯವರ ಎಂಟ್ರಿಯೊಂದಿಗೆ ಕ್ರಿಕೆಟ್ ವೀಕ್ಷಕ ವಿವರಣೆಗೆ ಒಂದು ಗ್ಲಾಮರ್ ಬಂದಿತು. ಇದರಿಂದ
ಮಹಿಳಾ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಯಿತು. ಕ್ರಿಕೆಟ್
ಆಟ ಆರಂಭವಾಗುವ ಮುನ್ನ ನಡೆಯುತ್ತಿದ್ದ ಚರ್ಚೆ ಕಾರ್ಯಕ್ರಮಗಳನ್ನು ನೋಡದ ಕೆಲವು ಪಡ್ಡೆ ಯುವಕರು, ಮಂದಿರ
ಬೇಡಿಯನ್ನು ನೋಡಲು ಟಿವಿ ಮುಂದೆ ಕೂರುತ್ತಿದ್ದರು.
ಇಂಗ್ಲಿಷ್ ಬರುವವರಿಗೆ
ಮೇಲೆ ಹೇಳಿದ ಪ್ರತಿ ವಿಷಯವು ಅದ್ಭುತ ಅನುಭವ. ಆದರೆ ಕ್ರಿಕೆಟ್ ಅನ್ನು ಧರ್ಮದಂತೆ ಸ್ವೀಕರಿಸಿರುವ
ನಮ್ಮ ದೇಶದಲ್ಲಿ ಅನೇಕ ಅಭಿಮಾನಿಗಳಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ. IPL ಕ್ರಾಂತಿಯ ನಂತರ ಬ್ರಾಡ್ಕಾಸ್ಟಿಂಗ್
ಸಂಸ್ಥೆಗಳು ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆಯನ್ನು ಆರಂಭಿಸಿದವು.
ಆರಂಭದಲ್ಲಿ ವೃತ್ತಿಪರತೆ ಕೊರತೆಯಿಂದ ಸ್ವಲ್ಪ ನಗೆಪಾಟಲಿಗೆ ಒಳಗಾದರೂ, ಇಂದು ಕನ್ನಡವೂ ಸೇರಿದಂತೆ
ಅನೇಕ ಭಾಷೆಗಳಲ್ಲಿ ಅತ್ಯಂತ ವೃತ್ತಿಪರವಾಗಿ ಕಾಮೆಂಟ್ರಿ ನಡೆಯುತ್ತಿದೆ.
ಕನ್ನಡದಲ್ಲಿ
ಕ್ರಿಕೆಟ್ ಕಂಪು: ಜಾನಿ ಮತ್ತು ವಿಜಯ್ ಭಾರದ್ವಾಜ್
ಐಪಿಎಲ್
ಕ್ರಾಂತಿಯ ನಂತರ ಪ್ರಾದೇಶಿಕ ಭಾಷೆಗಳಲ್ಲಿ
ಕಾಮೆಂಟರಿ ಆರಂಭವಾಯಿತು. ಇಂದು ಕನ್ನಡದಲ್ಲಿಯೂ ವೃತ್ತಿಪರ
ವೀಕ್ಷಕ ವಿವರಣೆ ಲಭ್ಯವಿದೆ.
- ಶ್ರೀನಿವಾಸ ಮೂರ್ತಿ (ಜಾನಿ): ಇವರನ್ನು 'ಕನ್ನಡದ ಜೆಫ್ರಿ ಬಾಯ್ಕಾಟ್' ಎಂದೇ ಕರೆಯಬಹುದು. ಇವರ ಅಂಕಿಅಂಶಗಳ ಜ್ಞಾನ ಮತ್ತು ಹಾಸ್ಯದ ಪಂಚ್ಗಳು ಅದ್ಭುತ.
- ವಿಜಯ್ ಭಾರದ್ವಾಜ್: ಇವರ ಶೈಲಿ ರವಿಶಾಸ್ತ್ರಿಯವರನ್ನು ನೆನಪಿಸುತ್ತದೆ. ರಣಜಿ ಕ್ರಿಕೆಟ್ ಸೇರಿದಂತೆ ಸ್ಥಳೀಯ ಕ್ರಿಕೆಟ್ ಬಗ್ಗೆ ಇವರಿಗಿರುವ ತಿಳುವಳಿಕೆ ಅಪಾರ.
- ದೂರದರ್ಶನ ಕಾಲದ ಶಂಕರ್ ಪ್ರಕಾಶ್ ಅವರ ಸ್ಪುಟವಾದ ಕನ್ನಡವನ್ನೂ ನಾವು ಮರೆಯುವಂತಿಲ್ಲ. ಬಹುಷಃ ಕನ್ನಡದ ಮೊದಲ ಟಿವಿ ವೀಕ್ಷಣೆ ವಿವರಣೆಕಾರ ಇವರೇ ಇರಬೇಕು.
ಕೊನೆಯ ಮಾತು: Richie Benaud ರಿಂದ ಹಿಡಿದು ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಹರ್ಷ ಭೋಗ್ಲೆ, ವಿಜಯ್ ಭಾರದ್ವಾಜ್ ತನಕ—ಕ್ರಿಕೆಟ್ ವೀಕ್ಷಕ ವಿವರಣೆಯ ಬೆಳವಣಿಗೆ ನಿಜಕ್ಕೂ ಒಂದು ಅದ್ಭುತ ಪಯಣ. ಕ್ರಿಕೆಟ್ ಆಟದಷ್ಟೇ ಜನಪ್ರಿಯವಾಗಿರುವ ಈ ಮಾತುಗಳು, ಈ ದಿಗ್ಗಜರ ಧ್ವನಿಗಳು, ನಮ್ಮ ಕ್ರಿಕೆಟ್ ನೆನಪುಗಳನ್ನು ಜೀವಂತವಾಗಿಟ್ಟಿವೆ.









Comments
Post a Comment