ಭಾರತದ ಲಿಟಲ್ ಫ್ರಾನ್ಸ್: ಪುದುಚೇರಿ – ಇತಿಹಾಸ, ವೈಪರೀತ್ಯ ಮತ್ತು ಜೀವನದ ವಿಪರ್ಯಾಸ


ಭಾರತದ ಭೂಪಟದಲ್ಲಿ ಪುದುಚೇರಿ ಎನ್ನುವುದು ಕೇವಲ ಒಂದು ಕೇಂದ್ರಾಡಳಿತ ಪ್ರದೇಶವಲ್ಲ; ಅದು ಇತಿಹಾಸದ ಪುಟಗಳು ಮತ್ತು ಆಧುನಿಕ ಜೀವನದ ವೈಪರೀತ್ಯಗಳು ಸಂಗಮಿಸುವ ಒಂದು ವಿಶಿಷ್ಟ ತಾಣ. 1947ರಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕರೂ, ಈ ಪುಟ್ಟ ಪ್ರಾಂತ್ಯ ಮಾತ್ರ 1954ರವರೆಗೆ ಫ್ರಾನ್ಸ್ ಆಡಳಿತದಲ್ಲೇ ಉಳಿದಿತ್ತು. 1962ರಲ್ಲಿ ಅಧಿಕೃತವಾಗಿ ಭಾರತದ ಕೇಂದ್ರಾಡಳಿತ ಭಾಗವಾದ ಪುದುಚೇರಿ, ಇಂದಿಗೂ ತನ್ನೊಡಲಲ್ಲಿ ಫ್ರೆಂಚ್ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡಿದೆ.

ವೈಟ್ ಟೌನ್: ಕಾಲದ ಹಾದಿಯಲ್ಲಿ ಒಂದು ಪಯಣ


ಪುದುಚೇರಿಯ 'ವೈಟ್ ಟೌನ್' (White Town) ಅಥವಾ ಫ್ರೆಂಚ್ ಕಾಲೋನಿಯಲ್ಲಿ ಹೆಜ್ಜೆ ಹಾಕಿದರೆ ನಾವು ಭಾರತದಲ್ಲಿದ್ದೇವೋ ಅಥವಾ ಫ್ರಾನ್ಸ್‌ನ ಯಾವುದೋ ಹಳೆಯ ಬೀದಿಯಲ್ಲಿದ್ದೇವೋ ಎಂಬ ಭ್ರಮೆ ಉಂಟಾಗುತ್ತದೆ.ಇಂದಿಗೂ ಸಹ ಕಾಲೋನಿಯಲ್ ಫ್ರಾನ್ಸ್ ಕುರುಹುಗಳು ಈ ಪ್ರದೇಶದಲ್ಲಿಇದೆ.

  • ವಾಸ್ತುಶಿಲ್ಪ: ಸಾಲು ಸಾಲಾದ ಹಳದಿ ಬಣ್ಣದ ಫ್ರೆಂಚ್ ಕಾಲೋನಿಯಲ್ ಶೈಲಿಯ ಕಟ್ಟಡಗಳು.

  • ರುಚಿ: ಅಧಿಕೃತ ಫ್ರೆಂಚ್ ಶೈಲಿಯ ಬೇಕರಿಗಳು ಮತ್ತು ಕೆಫೆಗಳು.

  • ಬದಲಾವಣೆ: ಹಿಂದೆ ವಸತಿಗೃಹಗಳಾಗಿದ್ದ ಅನೇಕ ಫ್ರೆಂಚ್ ಮನೆಗಳು ಇಂದು ಐಷಾರಾಮಿ ಹೋಟೆಲ್‌ ಮತ್ತು ಕೆಫೆಗಳಾಗಿ ಮಾರ್ಪಟ್ಟಿವೆ.

ಪ್ರಸಿದ್ಧ Promenade (ರಾಕ್) ಬೀಚ್‌ಗೆ ಹೊಂದಿಕೊಂಡಂತಿರುವ ಈ ಪ್ರದೇಶ ಅತ್ಯಂತ ಸುಸಜ್ಜಿತವಾಗಿದ್ದು, ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಒಂದಷ್ಟು ಫ್ರೆಂಚರು ಇಂದಿಗೂ ಸಹ ವಾಸಿಸುತ್ತಿದ್ದಾರೆ. ಇಂದಿಗೂ ಫ್ರೆಂಚ್ ಕಲೋನಿಯಲ್ ಶೈಲಿಯಲ್ಲಿ ಇರುವ ಸರ್ಕಾರೀ ಕಚೇರಿಗಳನ್ನು ಕಾಣಬಹುದು


ಅಭಿವೃದ್ಧಿಯ ಹಿಂದಿನ ಕರಾಳ ಮುಖ ಮತ್ತು ವೈಪರೀತ್ಯ


ಫ್ರೆಂಚ್ ಕಾಲೋನಿಯ ಅಂದವನ್ನು ಸವಿಯುತ್ತಿರುವಾಗಲೇ ಅದರ ಪಕ್ಕದ ಗಲ್ಲಿಗಳಲ್ಲಿ ಕಾಣುವ ದೃಶ್ಯಗಳು ನಮಗೆ ವಾಸ್ತವದ ಅರಿವು ಮಾಡಿಸುತ್ತವೆ. ಸುಸಜ್ಜಿತ ಫ್ರೆಂಚ್ ನಗರದ ಪಕ್ಕದಲ್ಲೇ ಅವ್ಯವಸ್ಥಿತ ಚರಂಡಿಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ.

ವಿಚಿತ್ರ ವೈಪರೀತ್ಯ: ಇತ್ತೀಚಿನ ದಿನಗಳಲ್ಲಿ ಇಂತಹ ಅವ್ಯವಸ್ಥಿತ ಪ್ರದೇಶಗಳಲ್ಲೂ ಫ್ರೆಂಚ್ ಶೈಲಿಯ ಕೆಫೆಗಳು ತಲೆ ಎತ್ತುತ್ತಿರುವುದು ಅಭಿವೃದ್ಧಿಯ ವಿಪರ್ಯಾಸಕ್ಕೆ ಹಿಡಿದ ಕನ್ನಡಿ.

ಇಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿದ್ದರೂ ಇಲ್ಲಿನ ಭಿಕ್ಷುಕರ ಸಮಸ್ಯೆ ಮತ್ತು ಸಾರ್ವಜನಿಕ ಕಿರಿಕಿರಿಗಳು ಪ್ರವಾಸಿಗರಲ್ಲಿ ಅಸಮಾಧಾನ ಮೂಡಿಸುತ್ತಿವೆ. ಸ್ಥಳೀಯ ಆಡಳಿತವು ಈ ಬಗ್ಗೆ ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ತುರ್ತು ಗಮನಹರಿಸಬೇಕಿದೆ.


ನನ್ನ ಮೊದಲ ಕಾರು

ನನಗೆ ಪುದುಚೇರಿ ಅಂದ ಕೂಡಲೇ ನೆನಪಾಗುವುದು 2016 ರಲ್ಲಿ ಕೊಂಡುಕೊಂಡ ನನ್ನ ಮೊದಲ ಕಾರು. 2016 ರಲ್ಲಿ ಹೊಸ ಕಾರು ಕೊಂಡಾಗ ನಾನು ಮೊದಲು long ride ಹೋಗಿದ್ದೆ ಪುದುಚೆರಿಗೆ. ಹತ್ತು ವರ್ಷಗಳ ಹಿಂದೆ ಇದ್ದ ಪುದುಚೇರಿ, ಇಂದು ಸಾಕಷ್ಟು  ಬದಲಾಗಿದೆ. ಹತ್ತು ವರ್ಷಗಳ ಹಿಂದೆ ನನ್ನ ಮೊದಲ ಹೊಚ್ಚ ಹೊಸ ಪುಟ್ಟ ಕಾರಿನಲ್ಲಿ promenade ಬೀಚ್ ನ ಮುಂದೆ ಕಾರು ಚಾಲನೆ ಮಾಡಿದ್ದು ನಿಜಕ್ಕೂ ರೋಮಾಂಚನದ ಅನುಭವ. ಹೆಚ್ಚುತ್ತಿರುವ ಪ್ರವಾಸಿಗರ ದಟ್ಟಣೆಯಿಂದಾಗಿ ಇಂದು ಆ ಬೀಚ್ ರಸ್ತೆಯಲ್ಲಿ ವಾಹನ ಸಂಚಾರವನ್ನೇ ನಿಷೇಧಿಸಲಾಗಿದೆ. 


ಆರೋವಿಲ್ಲೆ(Auroville): ವಿಶ್ವಮಾನವ ತತ್ವದ ಪ್ರಯೋಗಶಾಲೆ


ಪುದುಚೇರಿಯಿಂದ ಸ್ವಲ್ಪ ದೂರದಲ್ಲೇ ಇರುವ ಆರೋವಿಲ್ಲೆ (Auroville) ಒಂದು ಅದ್ಭುತ ಜಗತ್ತು. ಜಾತಿ, ಧರ್ಮ, ನಂಬಿಕೆ, ರಾಜಕೀಯ ಗಡಿಗಳಿಲ್ಲದೆ 60ಕ್ಕೂ ಹೆಚ್ಚು ದೇಶಗಳ ಜನರು ಇಲ್ಲಿ ಒಂದಾಗಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಇಲ್ಲಿ ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ಅತಿ ವಿಶಿಷ್ಟವಾಗಿ ಎಲ್ಲ ಗಡಿ ರೇಖೆಗಳನ್ನು ಮೀರಿದ ಸಮುದಾಯವಾಗಿ ಯುನೆಸ್ಕೋ ಸಹಕಾರದಲ್ಲಿ ಗುರುತಿಸಿಕೊಂಡಿದೆ.  ಪುದುಚೇರಿ ಇಂದ ಆರೋವಿಲ್ಲೆಗೆ(Auriville) ಹೋಗುವ ದಾರಿಯುದ್ದಕ್ಕೂ ಇಂದು ಗೋವಾ ಅನ್ನು ಕೂಡ ಮೀರಿಸುವ ಫ್ರೆಂಚ್ ಶೈಲಿಯ ಕೆಫೆಗಳು, ರೆಸಾರ್ಟ್ ಗಳು ತಲೆ ಎತ್ತಿ ನಿಂತಿವೆ ಮತ್ತು ಈ ಪ್ರದೇಶವು ನಮ್ಮ ಯುವ ಜನಾಂಗದ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಜನರು ಭೇಟಿ ಕೊಡುತ್ತಾರೆ.

ಜೀವನದ ದೊಡ್ಡ ವಿಪರ್ಯಾಸವೆಂದರೆ:

  • ನಮ್ಮ ದೇಶದ ಯುವಕರು ಉತ್ತಮ ಜೀವನ ಕಟ್ಟಿಕೊಳ್ಳುವುದಕ್ಕೆ ವಿದೇಶಕ್ಕೆ ಹೋಗುತ್ತಾರೆ.

  • ವಿದೇಶದ ಜನರು ಮನಶಾಂತಿಯ ಹುಡುಕಾಟದಲ್ಲಿ ಭಾರತದ ಆರೋವಿಲ್ಲೆಗೆ(Auroville) ಬರುತ್ತಾರೆ!

Aurovilleಯಲ್ಲಿ ನಮಗೆ ರಾಷ್ಟ್ರಕವಿ ಕುವೆಂಪು ಅವರ 'ವಿಶ್ವಮಾನವ' ತತ್ವ ಮತ್ತು ಗೋಪಾಲಕೃಷ್ಣ ಅಡಿಗರ ಈ ಸಾಲುಗಳು ನೆನಪಾಗುವುದು ಸಹಜ:

"ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ"


ಸಮಾರೋಪ

ಪುದುಚೇರಿ ಎಂಬುದು ಕೇವಲ ಒಂದು ಪ್ರವಾಸಿ ತಾಣವಲ್ಲ. ಅದು ಇತಿಹಾಸದ ನೆನಪು, ಆಧುನಿಕತೆಯ ಅಬ್ಬರ, ಬಡತನ-ಶ್ರೀಮಂತಿಕೆಯ ವೈಪರೀತ್ಯ ಮತ್ತು ಆಧ್ಯಾತ್ಮದ ಹುಡುಕಾಟದ ಸಂಕಲನ. ಇದನ್ನು ಕೇವಲ ಕಣ್ಣಿನಿಂದ ನೋಡಬಾರದು, ಅನುಭವಿಸಬೇಕು ಅಷ್ಟೆ.

Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧