ಬಸವನಗುಡಿ: ಬೆಂಗಳೂರು ನಗರದ ಹೆಗ್ಗುರುತು


ಬೆಂಗಳೂರು ಇಂದು 'ಸಿಲಿಕಾನ್ ಸಿಟಿ' ಆಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿರಬಹುದು. ಆದರೆ, ಈ ಆಧುನಿಕ ಮೆಟ್ರೋಪಾಲಿಟನ್ ನಗರದ ಗದ್ದಲದ ನಡುವೆಯೂ ತನ್ನತನವನ್ನು, ಮಣ್ಣಿನ ಸೊಗಡನ್ನು ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಒಂದು ಪ್ರದೇಶವಿದ್ದರೆ ಅದು ಬಸವನಗುಡಿ.

ಹಬ್ಬಗಳ ತವರು ಈ ಬಸವನಗುಡಿ


ಹಬ್ಬ ಹರಿದಿನ ಬಂತೆಂದರೆ ಬೆಂಗಳೂರಿನ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಬಸವನಗುಡಿ. ಸಂಕ್ರಾಂತಿಯ ಸಕ್ಕರೆ ಅಚ್ಚು, ಎಳ್ಳು-ಬೆಲ್ಲದಿಂದ ಹಿಡಿದು ದೀಪಾವಳಿಯ ಒಬ್ಬಟ್ಟು,ಕಜ್ಜಾಯದವರೆಗೆ - ಹಬ್ಬದ ಪೂಜೆಗೆ ಬೇಕಾದ ಸಕಲ ಸಾಮಗ್ರಿಗಳೂ ಇಲ್ಲಿ ಲಭ್ಯ. ಇಂದಿನ ಧಾವಂತದ ಬದುಕಿನಲ್ಲಿ ತಿನಿಸುಗಳನ್ನು ತಯಾರಿಸಲು ಸಮಯವಿಲ್ಲದ ಆಧುನಿಕ ಮಹಿಳೆಯರಿಗೆ ಬ್ರಾಹ್ಮಣ ಕುಟುಂಬಗಳು ನಡೆಸುವ ಬೃಂದಾವನ ಸ್ಟೋರ್ಸ್, ಗುರು ರಾಘವೇಂದ್ರ ಸ್ಟೋರ್ಸ್ ಮತ್ತು ರಾಮ ಟ್ರೇಡರ್ಸ್‌ನಂತಹ ಅಂಗಡಿಗಳು ಲಭ್ಯವಿದೆ.

ನಗರದೊಳಗಿನ ಒಂದು ಹಳ್ಳಿ

ಬಸವನಗುಡಿಯನ್ನು 'ಬೆಂಗಳೂರಿನ ಒಳಗಿರುವ ಹಳ್ಳಿ' ಎನ್ನಬಹುದು. ಇಲ್ಲಿನ ಕಡಲೇಕಾಯಿ ಪರಿಷೆ ಹಳ್ಳಿಯ ಜಾತ್ರೆಯನ್ನೇ ನೆನಪಿಸುತ್ತದೆ. ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆಯುವ ಪ್ರಸಿದ್ಧ ಅವರೆಬೇಳೆ ಮೇಳ ಮತ್ತು ಮೈಸೂರು ದಸರಾವನ್ನೂ ಮೀರಿಸುವಂತಹ ಗಣೇಶೋತ್ಸವ ಈ ಭಾಗದ ಸಾಂಸ್ಕೃತಿಕ ಮೆರುಗು.

ಕಲೆ,ಸಾಹಿತ್ಯ,ಶಿಕ್ಷಣ,ಕ್ರೀಡೆ ಮತ್ತು ಸಾಂಸ್ಕೃತಿಕ ದಿಗ್ಗಜರ ನೆಲೆವೀಡು

ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದರೆ, ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರ ಬಸವನಗುಡಿ. ಬಸವನಗುಡಿ ಅಪ್ಪಟ ಕನ್ನಡದ ಹೆಸರು.

  • ಡಿ.ವಿ.ಗುಂಡಪ್ಪ: ನಮಗೆ 'ಮಂಕುತಿಮ್ಮನ ಕಗ್ಗ' ನೀಡಿದ ಡಿವಿಜಿಯವರು ಬಾಳಿ ಬದುಕಿದ ಬೀದಿ ಇಂದು ಅವರದೇ ಹೆಸರಿನಲ್ಲಿ (ಡಿ.ವಿ.ಜಿ ರಸ್ತೆ) ಅಮರವಾಗಿದೆ.

  • ಮಾಸ್ತಿ ವೆಂಕಟೇಶ ಅಯ್ಯಂಗಾರ್: ಕನ್ನಡದ ಆಸ್ತಿ ಮಾಸ್ತಿಯವರು ನೆಲೆಸಿದ್ದ ಗವಿಪುರಂ ಬಸವನಗುಡಿಯ ಪಕ್ಕದಲ್ಲೇ ಇದೆ.

  • ಟಿ.ಪಿ. ಕೈಲಾಸಂ: ಕನ್ನಡಕ್ಕೊಬ್ಬರೇ ಕೈಲಾಸಂ ಎಂದೇ ಪ್ರಸಿದ್ದಿ ಹೊಂದಿದ್ದ ಪ್ರಖ್ಯಾತ ನಾಟಕಕಾರ ಟಿ ಪಿ ಕೈಲಾಸಂ ಸಹ ಬಸವನಗುಡಿಯವರೇ

  • ಲಂಕೇಶ್: ನಿರ್ಭೀತ ಪತ್ರಕರ್ತ ಲಂಕೇಶರ ಬಸವನಗುಡಿಯ ಪತ್ರಿಕಾ ಕಚೇರಿ ರಾಜಕೀಯ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಸಾಕ್ಷಿಯಾಗಿತ್ತು.

  • ಖ್ಯಾತ ಶಿಕ್ಷಣ ತಜ್ಞ H ನರಸಿಂಹಯ್ಯ ನವರು ನ್ಯಾಷನಲ್ ಕಾಲೇಜು ಹುಟ್ಟಿಗೆ ಪ್ರಮುಖ ಕಾರಣರಾಗಿದ್ದರು. ತಮ್ಮ ಜೀವಿತಾವಧಿಯನ್ನು ಇದೆ ಕಾಲೇಜು ಹಾಸ್ಟೆಲ್ನ ರೂಮಿನಲ್ಲಿ ಕಳೆದಿದ್ದರು. 

ಇಷ್ಟೇ ಅಲ್ಲದೆ, ಚಂದ್ರಶೇಖರ್, ಪ್ರಸನ್ನ, ವಿಶ್ವನಾಥ್, ರಜನಿಕಾಂತ್, ಅನಿಲ್ ಕುಂಬ್ಳೆ, ಸಿ. ಅಶ್ವಥ್, ವೈಎನ್ ಕೆ,ಪ್ರಜಾವಾಣಿಯ ಸಂಸ್ಥಾಪಕ ಕೆ ಏನ್ ಗುರುಸ್ವಾಮಿ ಅಂತಹ ಪ್ರತಿಭಾವಂತರ ಬಾಲ್ಯ ಮತ್ತು ವೃತ್ತಿಜೀವನ ಬಸವನಗುಡಿಯ ಗಲ್ಲಿಗಳಲ್ಲೇ ಅರಳಿದ್ದು.

ರುಚಿಯ ಲೋಕ: ವಿದ್ಯಾರ್ಥಿ ಭವನದಿಂದ ಮುದ್ದಣ್ಣ ಹೋಟೆಲ್ವರೆಗೆ

ಬಸವನಗುಡಿ ಅಂದರೆ ಕೇವಲ ಕಲೆ,ಸಾಹಿತ್ಯ,ಶಿಕ್ಷಣ,ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರದೇಶವಲ್ಲ, ಇಲ್ಲಿನ ಸ್ವಾದವೂ ಅನನ್ಯ.

  • ವಿದ್ಯಾರ್ಥಿ ಭವನ: ಬಸವನಗುಡಿಯ ಗಾಂಧಿ ಬಜಾರ್ ಅಲ್ಲಿ ಇರುವ ವಿಶ್ವ ಪ್ರಸಿದ್ಧ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಡದ ಗಣ್ಯರಿಲ್ಲ. ಹತ್ತಾರು ಪ್ಲೇಟ್ ದೋಸೆಗಳನ್ನು ಕೈಯಲ್ಲಿ ಹಿಡಿದು ತರುವ ಆ ದೃಶ್ಯ ಮತ್ತು ದೋಸೆಯ ರುಚಿ ಜಗತ್ಪ್ರಸಿದ್ಧ.

  • ಮುದ್ದಣ್ಣ ಹೋಟೆಲ್: ಬೆಂಗಳೂರಿನ ಪುರಾತನ Cubbon ಪೇಟೆ ಸಂಸ್ಕೃತಿಯ SLN ಮುದ್ದಣ್ಣ ಹೋಟೆಲ್ನ ಸಬ್ಬಕ್ಕಿ ಇಡ್ಲಿ ಮತ್ತು ಪಲಾವ್ ಮುಂದೆ ಬೇರೆಲ್ಲವೂ ಶೂನ್ಯ. ರುಚಿಯಲ್ಲಿ ಮುದ್ದಣ್ಣನ ದೋಸೆಯೇ ಮೇಲು ಎಂಬುದು ಅನೇಕರ ಅಭಿಪ್ರಾಯ.

  • ಗಣೇಶ ಫ್ರೂಟ್ ಜ್ಯೂಸ್, ಪುಳಿಯೋಗರೆ ಪಾಯಿಂಟ್, ಕಾಮತ್ ಹೋಟೆಲ್ ಮತ್ತು ಇತ್ತೀಚಿನ ತಲೆಮಾರಿನ ಬೈ ಟು ಕಾಫಿ - ಇಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುವ ತಿಂಡಿ ತಿನಿಸುಗಳಿವೆ.

  • ಉತ್ತರ ಭಾರತೀಯರಿಗೆ ಗಾಂಧಿ ಬಜಾರ್ ಅಲ್ಲಿ ರೋಟಿ ಘರ್ ಇದೆ ಹಾಗೆ ಇತ್ತೀಚಿನ ತಲೆಮಾರಿನ ತಿವಾರಿ'ಸ್ ಕೂಡ ತಲೆ ಎತ್ತಿದೆ.

  • ಬಸವನಗುಡಿಯ ಬೀದಿ ಆಹಾರಗಳು ವಿಶಿಷ್ಟ ರುಚಿಯಿಂದಲೇ ಆಹಾರಪ್ರಿಯರನ್ನು ಆಕರ್ಷಿಸುತ್ತವೆ.

 ಧಾರ್ಮಿಕ ಕ್ಷೇತ್ರ ಮತ್ತು ಶೈಕ್ಷಣಿಕ ಶಕ್ತಿ ಕೇಂದ್ರ


 ದೊಡ್ಡ ಬಸವಣ್ಣನ ದೇವಸ್ಥಾನ ಬಸವನಗುಡಿಯ ಇತಿಹಾಸದ ಜೊತೆಗೆ ಬೆಸೆದುಕೊಂಡಿದೆ. ದೊಡ್ಡ ಗಣೇಶನ ದೇವಸ್ಥಾನದಲ್ಲಿ ಸಾಕಷ್ಟು ಹಳೆ ಕನ್ನಡ ಸಿನಿಮಾದ ಚಿತ್ರೀಕರಣವಾಗಿದೆ. ಜೊತೆಗೆ ಇದೆ ರಸ್ತೆಯಲ್ಲಿ ಗೋವರ್ಧನಗಿರಿಯ ಪುತ್ತಿಗೆ ಮಠ, ನ್ಯಾಷನಲ್ ಕಾಲೇಜು ಎದುರುಗಡೆ ಅಲ್ಲಿ ಇರುವ ಜಯತೀರ್ಥ ಬೃಂದಾವನದ ಸನ್ನಿಧಾನದಲ್ಲಿ ಇರುವ ರಾಘವೇಂದ್ರ ಸ್ವಾಮಿ ಮಠ ಬಸವನಗುಡಿಯ ಧಾರ್ಮಿಕತೆಗೆ ಹೆಸರುವಾಸಿಯಾಗಿದೆ. ಬಸವನಗುಡಿ ಸುತ್ತಮುತ್ತಲಿನ ಶ್ರೀ ರಾಮಾಂಜನೇಯ ಸ್ವಾಮಿ, ಶ್ರೀ ಸುಬ್ರಮಣ್ಯ ಸ್ವಾಮಿ ಮತ್ತು ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳ ಜೊತೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೂ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.


ಬೆಂಗಳೂರು ಇಂದು ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳುವುದಕ್ಕೆ ಬುನಾದಿ ಹಾಕಿದ್ದೆ BMS ಕಾಲೇಜಿನಂತಹ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು. ಇನ್ನು ನ್ಯಾಷನಲ್ ಕಾಲೇಜಿನಲ್ಲಿ ಓದಿದವರು ಕಲೆ, ಸಾಹಿತ್ಯ.ವಿಜ್ಞಾನ, ಕ್ರೀಡೆ  ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಭಾರತ ರತ್ನ ಸಿ ಏನ್ ಆರ್ ರಾವ್, ಕರ್ನಾಟಕ ರತ್ನ ವಿಷ್ಣುವರ್ಧನ್, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಕಾಶ್ ಪಡುಕೋಣೆ ಮುಂತಾದವರು ಇದೆ ಕಾಲೇಜಿನಲ್ಲಿ ಓದಿದವರು. ಅನೇಕ ಐಎಎಸ್ , ಐಪಿಎಸ್ ಅಧಿಕಾರಿಗಳು ಸಹ ಈ ಕಾಲೇಜಿನಲ್ಲಿ ಓದಿದ್ದಾರೆ. APS ಕಾಲೇಜಿನಲ್ಲಿಯೂ ಅನೇಕ ಮಹಾನ್ ಪ್ರತಿಭೆಗಳು ಓದಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ನನ್ನ ವೃತ್ತಿಜೀವನದ ಆರಂಭ ಮತ್ತು ಬಸವನಗುಡಿ

ನನಗೂ ಬಸವನಗುಡಿಗೂ ಒಂದು ಅವಿನಾಭಾವ ಸಂಬಂಧವಿದೆ. ನನ್ನ ಐಟಿ (IT) ವೃತ್ತಿಜೀವನ ಆರಂಭವಾಗಿದ್ದೇ ಇಲ್ಲಿ. ಡಿವಿಜಿ ರಸ್ತೆಯ ಹಿಂಭಾಗದ ಪುಟ್ಟ ರೂಮಿನಲ್ಲಿ, ಆರು ತಿಂಗಳು ಸಂಬಳವಿಲ್ಲದೆ ದುಡಿದ ಆ ಕಷ್ಟದ ದಿನಗಳಲ್ಲಿ ನನಗೆ ಮಾಹಿತಿ ತಂತ್ರಜ್ಞಾನದ ಅಕ್ಷರ ಕಲಿಸಿದ್ದು ಇದೇ ಬಸವನಗುಡಿ. ಬ್ಯುಗಲ್ ರಾಕ್, ನೆಟ್ಟಕಲ್ಲಪ್ಪ ಸರ್ಕಲ್, ಡಿ.ವಿ.ಜಿ ರಸ್ತೆ, ಗಾಂಧಿ ಬಜಾರ್  ನನ್ನ ಆ ಕಷ್ಟದ ದಿನಗಳ ಮೌನ ಸಾಕ್ಷಿಗಳು.

ಆತಂಕದ ನೆರಳು: ಬದಲಾಗುತ್ತಿರುವ ಬಸವನಗುಡಿ

ಇಷ್ಟೆಲ್ಲಾ ಇತಿಹಾಸವಿರುವ ಈ ಪ್ರದೇಶ ಇಂದು ಬದಲಾಗುತ್ತಿದೆ. ಇಲ್ಲಿ ಬೆಳೆದ ಕನ್ನಡಿಗರು ವಿದೇಶಗಳಿಗೆ ಅಥವಾ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ವಲಸೆ ಹೋಗುತ್ತಿರುವುದರಿಂದ, ಈ ಅಪ್ಪಟ ಕನ್ನಡದ ನೆಲ ಇಂದು ಅನ್ಯಭಾಷಿಕರ ಕೈವಶವಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಕನ್ನಡದ ಸಾಂಸ್ಕೃತಿಕ ಬೇರುಗಳು ಇಲ್ಲಿ ಸಡಿಲವಾಗುತ್ತಿವೆಯೇ ಎಂಬ ಪ್ರಶ್ನೆ ಮನಸ್ಸನ್ನು ಚುಚ್ಚುತ್ತಿದೆ.

ಕೊನೆಯ ಮಾತು: ಬಸವನಗುಡಿಯ ವಿಚಿತ್ರ ಏನು ಎಂದರೆ, ಇಲ್ಲಿ ಬಹು ಸಂಖ್ಯೆಯಲ್ಲಿ ಇರುವುದು ಮಧ್ಯಮ ವರ್ಗದ ಬ್ರಾಹ್ಮಣರು. ಆದರೆ ಇದೆ ಬ್ರಾಹ್ಮಣರ ಕುಟುಂಬಗಳ ನಡುವೆ ಇದ್ದುಕೊಂಡು ಖ್ಯಾತ ಪತ್ರಕರ್ತ ಲಂಕೇಶ್ ಮತ್ತು ಗೌರಿ ಲಂಕೇಶ್ ಅವರು ಬ್ರಾಹ್ಮಣತ್ವದ ವಿರುದ್ದದ ನಿಲುವನ್ನು ಪ್ರತಿಪಾದಿಸುತ್ತಿದ್ದರು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸೋಜಿಗ.


Comments

Popular posts from this blog

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

ಸಾಮಾನ್ಯರ ಜೀವನದಲ್ಲಿ ಅಸಾಧಾರಣ ಬದಲಾವಣೆ ತಂದ ತಂತ್ರಜ್ಞಾನದ ಆಧುನಿಕ ವ್ಯವಸ್ಥೆ

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧